ಲಂಡನ್‌ನಲ್ಲಿ ವಲಸೆ ವಿರೋಧಿಸಿ ಟಾಮಿ ರಾಬಿನ್ಸನ್ ನೇತೃತ್ವದಲ್ಲಿ ಪ್ರತಿಭಟನೆ: ಲಕ್ಷಾಂತರ ಮಂದಿ ಭಾಗಿ, ಪೊಲೀಸರ ಮೇಲೆ ಹಲ್ಲೆ
Photo credit: PTI
ಲಂಡನ್ : ವಲಸೆ ವಿರೋಧಿಸಿ ಟಾಮಿ ರಾಬಿನ್ಸನ್ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದಾರೆ. ಪ್ರತಿಭಟನಾಕಾರರು ಪೊಲೀಸರ ಮೇಲೆ ದಾಳಿ ನಡೆಸಿದ್ದು ಹಲವು ಪೊಲೀಸರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪ್ರತಿಭಟನೆಗಳ ನಡುವೆ ಹಲವಾರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಪ್ರತಿಭಟನೆಯ ವೇಳೆ 26 ಮಂದಿ ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದು, ಅವರಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಈಗಾಗಲೇ ಕನಿಷ್ಠ 25 ಜನರನ್ನು ಬಂಧಿಸಲಾಗಿದೆ ಮತ್ತು ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಲಸೆ ವಿರೋಧಿ ಕಾರ್ಯಕರ್ತ ಟಾಮಿ ರಾಬಿನ್ಸನ್ ನೇತೃತ್ವದಲ್ಲಿ ನಡೆದ “ಯುನೈಟ್ ದಿ ಕಿಂಗ್‌ಡಮ್” ಎಂಬ ರ್ಯಾಲಿಯಲ್ಲಿ 1 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದರು. ವೈರಲ್ ವೀಡಿಯೊದಲ್ಲಿ ಸೆಂಟ್ರಲ್ ಲಂಡನ್‌ನ ಕೆಲವು ರಸ್ತೆಗಳು ಪ್ರತಿಭಟನಾಕಾರರಿಂದ ತುಂಬಿಕೊಂಡಿರುವುದು ಕಂಡು ಬಂದಿದೆ.
ಬ್ರಿಟನ್‌ನ ಗಡಿಗಳಲ್ಲಿ ಬಿಗಿ ಭದ್ರತೆ ಹೆಚ್ಚಿಸುವುದು ಮತ್ತು ಅಕ್ರಮ ವಲಸೆಯನ್ನು ನಿಲ್ಲಿಸುವ ಉದ್ದೇಶದಿಂದ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಹೇಳಲಾಗಿದೆ.