ಟ್ರಂಪ್ ಆಡಳಿತದ ಪೌರತ್ವ ಆದೇಶಕ್ಕೆ ಅಮೆರಿಕ ಕೋರ್ಟ್ ತಡೆ
PC: x.com/USATODAY
ಸಿಯಾಟೆಲ್: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಪೌರತ್ವಕ್ಕೆ ಸಂಬಂಧಿಸಿದಂತೆ ಹೊರಡಿಸಿದ ಕಾರ್ಯಾದೇಶದ ಜಾರಿಗೆ ಫೆಡರಲ್ ನ್ಯಾಯಾಧೀಶರು ಗುರುವಾರ ತಡೆ ವಿಧಿಸಿದ್ದಾರೆ. ಇದನ್ನು ಅಸಂವಿಧಾನಿಕ ಎಂದು ನ್ಯಾಯಾಲಯ ಘೋಷಿಸಿದೆ.
ಹುಟ್ಟಿನಿಂದಲೇ ಅಮೆರಿಕದ ಪೌರತ್ವವನ್ನು ಪಡೆಯುವ ಹಕ್ಕನ್ನು ಮೊಟಕುಗೊಳಿಸುವ ಕಾರ್ಯಾದೇಶಕ್ಕೆ ಡೊನಾಲ್ಡ್ ಟ್ರಂಪ್ ತಮ್ಮ ಎರಡನೇ ಅಧ್ಯಕ್ಷಾವಧಿಯ ಮೊದಲ ದಿನವೇ ಸಹಿ ಮಾಡಿದ್ದರು.
ರಿಪಬ್ಲಿಕನ್ ಅಧ್ಯಕ್ಷರು ಸೋಮವಾರ ಸಹಿ ಮಾಡಿದ ಕಾರ್ಯಾದೇಶದ ಜಾರಿಗೆ ತಡೆಯೊಡ್ಡುವಂತೆ ಕೋರಿ ಡೆಮಾಕ್ರಟಿಕ್ ಆಡಳಿತದ ನಾಲ್ಕು ರಾಜ್ಯಗಳು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಅಮೆರಿಕದ ಜಿಲ್ಲಾ ನ್ಯಾಯಾಧೀಶ ಜಾನ್ ಕಫ್ನೌರ್ ಈ ತಡೆಯಾಜ್ಞೆ ವಿಧಿಸಿದ್ದಾರೆ.
"ಇದು ಸಂಪೂರ್ಣವಾಗಿ ಕಾನೂನುಬಾಹಿತ ಆದೇಶ" ಎಂದು ಟ್ರಂಪ್ ಕಾರ್ಯಾದೇಶದ ಕುರಿತಂತೆ ಅಮೆರಿಕದ ನ್ಯಾಯಾಂಗ ಇಲಾಖೆಯ ವಕೀಲರಿಗೆ ನ್ಯಾಯಮೂರ್ತಿ ಹೇಳಿದರು.
ಟ್ರಂಪ್ ಆದೇಶದ ವಿರುದ್ಧ ನಾಗರಿಕ ಹಕ್ಕು ಸಂಘಟನೆಗಳು ಈಗಾಗಲೇ ಐದು ದಾವೆಗಳನ್ನು ಸಲ್ಲಿಸಿವೆ. ಜತೆಗೆ 22 ರಾಜ್ಯಗಳ ಡೆಮಾಕ್ರಟಿಕ್ ಅಟಾರ್ನಿ ಜನರಲ್ ಗಳು ಕೂಡಾ ದಾವೆ ಸಲ್ಲಿಸಿದ್ದಾರೆ. ಈ ಆದೇಶ ಅಮೆರಿಕ ಸಂವಿಧಾನದ ಸ್ಪಷ್ಟ ಉಲ್ಲಂಘನೆ ಎಂದು ವಾದಿಸಲಾಗಿದೆ.
ಈ ಆದೇಶದ ಅನ್ವಯ ಇಂದು ಹುಟ್ಟಿನ ಶಿಶುಗಳು ಅಮೆರಿಕದ ಪೌರರಾಗಲು ಸಾಧ್ಯವಿಲ್ಲ ಎಂದು ವಾಷಿಂಗ್ಟನ್ ಸಹಾಯಕ ಅಟಾರ್ನಿ ಜನರಲ್ ಲಾಲ್ ಪೊಲೊಝೋಲಾ ಅವರು ಅಮೆರಿಕದ ಜಿಲ್ಲಾ ನ್ಯಾಯಾಧೀಶ ಜಾನ್ ಕಫ್ನೌರ್ ಅವರಿಗೆ ವಿಚಾರಣೆ ಆರಂಭದ ವೇಳೆ ಸ್ಪಷ್ಟನೆ ನೀಡಿದ್ದರು.