ಕೆಲಸಗಳ ವಿವರ ಸಲ್ಲಿಸುವಂತೆ ಯುಎಸ್ ಫೆಡರಲ್ ಉದ್ಯೋಗಿಗಳಿಗೆ ಮತ್ತೆ ಇಮೇಲ್
Photo: Rueters
ಹೊಸದಿಲ್ಲಿ: ಅಮೆರಿಕದ ಫೆಡರಲ್ ಉದ್ಯೋಗಿಗಳಿಗೆ ಅವರು ವಾರದಲ್ಲಿ ಮಾಡಿರುವ ಕೆಲಸಗಳ ಪಟ್ಟಿಯನ್ನು ಸಲ್ಲಿಸುವಂತೆ ಸೂಚಿಸುವ ಇಮೇಲ್‌ಗಳು ಶುಕ್ರವಾರ ಸಂಜೆಯಿಂದ ಬರತೊಡಗಿವೆ. ಇದರೊಂದಿಗೆ ಕೆಲವು ದಿನಗಳ ಹಿಂದಷ್ಟೇ ಸರಕಾರದಲ್ಲಿ ಭೀತಿ ಮತ್ತು ಗೊಂದಲವನ್ನು ಹರಡಿದ್ದ ಎಲಾನ್ ಮಸ್ಕ್ ಅವರ ವಿನಂತಿಯು ಪುನರಾವರ್ತನೆಗೊಂಡಿದೆ.
ವರದಿಯನ್ನು ಪ್ರಕಟಿಸಿರುವ ದಿ ನ್ಯೂಯಾರ್ಕ್ ಟೈಮ್ಸ್ ಪರಿಶೀಲಿಸಿರುವ ಇಮೇಲ್‌ಗಳ ಪ್ರತಿಗಳ ಪ್ರಕಾರ ರಕ್ಷಣೆ,ಕಾರ್ಮಿಕ ಮತ್ತು ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ಉದ್ಯೋಗಿಗಳು ಸಿಬ್ಬಂದಿ ನಿರ್ವಹಣೆ ಕಚೇರಿಯಿಂದ ಇಮೇಲ್‌ಗಳನ್ನು ಸ್ವೀಕರಿಸಿದ್ದಾರೆ.
‘ಕಳೆದ ವಾರ ನೀವು ಏನು ಮಾಡಿದ್ದೀರಿ? ಭಾಗ II ’ ಎಂಬ ಶೀರ್ಷಿಕೆಯ ಇಮೇಲ್ ತಮ್ಮ ಕೆಲಸದ ವಾರದಲ್ಲಿಯ ಐದು ಸಾಧನೆಗಳ ಪಟ್ಟಿಯೊಂದಿಗೆ ಉತ್ತರಿಸುವಂತೆ ಫೆಡರಲ್ ಉದ್ಯೋಗಿಗಳಿಗೆ ಕಳೆದ ವಾರಾಂತ್ಯದಲ್ಲಿ ಕಳುಹಿಸಲಾಗಿದ್ದ ಇಮೇಲ್‌ನ್ನೇ ಪ್ರತಿಧ್ವನಿಸಿದೆ. ಈ ಬರಸಿಡಿಲಿಗೆ ಮುನ್ನ,ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಫೆಡರಲ್ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ಜವಾಬ್ದಾರಿಯನ್ನು ಪಡೆದಿರುವ ಬಿಲಿಯಾಧೀಶ ಮಸ್ಕ್ ಅವರು, ಈ ಬಗ್ಗೆ ಉದ್ಯೋಗಿಗಳಿಗೆ ಇಮೇಲ್ ರವಾನಿಸಲಾಗುವುದು ಮತ್ತು ಅವರು ಉತ್ತರಿಸಲು ವಿಫಲಗೊಂಡರೆ ಅದನ್ನು ಅವರ ರಾಜೀನಾಮೆ ಎಂದು ಪರಿಗಣಿಸಲಾಗುವುದು ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದರು.
ಶುಕ್ರವಾರ ಉದ್ಯೋಗಿಗಳಿಗೆ ಕಳಿಸಲಾಗಿರುವ ಸಂದೇಶದಲ್ಲಿ ವಾರದಲ್ಲಿ ಮಾಡಿರುವ ಐದು ಕೆಲಸಗಳನ್ನು ವಿವರಿಸುವಂತೆ ಮೊದಲಿನ ಸೂಚನೆಯನ್ನೇ ನೀಡಲಾಗಿದೆ. ಅವರು ಪ್ರತಿ ಸೋಮವಾರ ರಾತ್ರಿ 11:59ರೊಳಗೆ ಈ ಕೆಲಸವನ್ನು ಪೂರ್ಣಗೊಳಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ ಎಂದೂ ಇಮೇಲ್ ಸಂದೇಶದಲ್ಲಿ ತಿಳಿಸಲಾಗಿದೆ.
ಮೊದಲ ಇಮೇಲ್‌ಗೆ ಹೋಲಿಸಿದರೆ ಪ್ರಸ್ತುತ ಸಂದೇಶದಲ್ಲಿ ಅಲ್ಪ ವ್ಯತ್ಯಾಸಗಳಿವೆ. ಈ ಬಾರಿ,ವರ್ಗೀಕೃತ ಅಥವಾ ಸೂಕ್ಷ್ಮ ಚಟುವಟಿಕೆಗಳನ್ನು ಮಾತ್ರ ನಿರ್ವಹಿಸುವ ಉದ್ಯೋಗಿಗಳಿಗೆ ತಮ್ಮ ಉತ್ತರದಲ್ಲಿ ‘ನನ್ನ ಎಲ್ಲ ಚಟುವಟಿಕೆಗಳು ಸೂಕ್ಷ್ಮವಾಗಿವೆ’ ಎಂದು ಬರೆಯುವಂತೆ ಸೂಚಿಸಲಾಗಿದೆ.
ತಾನು ಟ್ರಂಪ್ ಸೂಚನೆಯಂತೆ ಕಾರ್ಯ ನಿರ್ವಹಿಸುತ್ತಿರುವುದಾಗಿ ಮಸ್ಕ್ ಹೇಳಿಕೊಂಡಿದ್ದರೂ ಮೂಲ ನಿರ್ದೇಶನವು ಕೋಲಾಹಲವನ್ನು ಸೃಷ್ಟಿಸಿತ್ತು ಮತ್ತು ಫೆಡರಲ್ ಸರಕಾರದಾದ್ಯಂತ ಸಾಮೂಹಿಕ ಗೊಂದಲಕ್ಕೆ ಕಾರಣವಾಗಿತ್ತು.
ಕೆಲವು ಸಂದರ್ಭಗಳಲ್ಲಿ ಫೆಡರಲ್ ಉದ್ಯೋಗಿಗಳು ತಾವು ಕೆಲಸ ಮಾಡದಿರುವಾಗ ತಮ್ಮ ಸರಕಾರಿ ಇಮೇಲ್‌ಗೆ ಪ್ರವೇಶಾವಕಾಶವನ್ನು ಹೊಂದಿರುವುದಿಲ್ಲ. ಕೆಲವು ಮ್ಯಾನೇಜರ್‌ಗಳು ಇಮೇಲ್‌ಗೆ ಉತ್ತರಿಸುವಂತೆ ತಮ್ಮ ಸಿಬ್ಬಂದಿಗಳಿಗೆ ಸೂಚಿಸಿದ್ದರೆ,ಇತರರು ಉತ್ತರಿಸದಂತೆ ಸಿಬ್ಬಂದಿಗಳಿಗೆ ತಿಳಿಸಿದ್ದರು. ಮಸ್ಕ್ ಆದೇಶ ಪಾಲನೆಯು ಉದ್ಯೋಗಿಗಳು ರಾಷ್ಟ್ರೀಯ ಭದ್ರತಾ ರಹಸ್ಯಗಳು ಮತ್ತು ಇತರ ಸೂಕ್ಷ್ಮ ಮಾಹಿತಿಗಳನ್ನು ಬಹಿರಂಗಗೊಳಿಸಲು ಕಾರಣವಾಗಬಹುದು ಎಂದು ಕೆಲವು ಏಜೆನ್ಸಿಗಳ ಮುಖ್ಯಸ್ಥರು ಕಳವಳಗೊಂಡಿದ್ದಾರೆ.
ಸೋಮವಾರ ಮಧ್ಯಾಹ್ನದ ವೇಳೆಗೆ ಸಿಬ್ಬಂದಿ ನಿರ್ವಹಣೆ ಕಚೇರಿಯು ಏಜೆನ್ಸಿಗಳ ಮುಖ್ಯಸ್ಥರಿಗೆ ಅವರ ಸಿಬ್ಬಂದಿಗಳು ವಾರದ ಕೆಲಸಗಳ ವಿವರಗಳನ್ನು ಕೋರಿದ್ದ ಮೂಲ ಇಮೇಲ್‌ಗೆ ಉತ್ತರಿಸುವ ಅಗತ್ಯವಿಲ್ಲ ಎಂದು ತಿಳಿಸಿತ್ತು.
ಉದ್ಯೋಗಿಗಳ ಮೇಲಿನ ಗದಾಪ್ರಹಾರವನ್ನು ಫೆಡರಲ್ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. 23 ಲಕ್ಷ ಉದ್ಯೋಗಿಗಳನ್ನು ಒಳಗೊಂಡಿರುವ ಫೆಡರಲ್ ಕಾರ್ಯಪಡೆಯ ಮೇಲೆ ಸಿಬ್ಬಂದಿ ನಿರ್ವಹಣೆ ಕಚೇರಿಯು ಹೊಂದಿರುವ ಅಧಿಕಾರದ ಮಿತಿಗಳನ್ನು ಪರಿಶೀಲಿಸಿರುವ ನ್ಯಾಯಾಲಯವು, ಪ್ರೊಬೇಷನ್‌ನಲ್ಲಿರುವ ಬಹುತೇಕ ಉದ್ಯೋಗಿಗಳನ್ನು ವಜಾಗೊಳಿಸಲು ಕ್ರಮಗಳನ್ನು ವಿವರಿಸಿ ಮೆಮೊಗಳನ್ನು ಹೊರಡಿಸುವ ಮೂಲಕ ಅದು ತನ್ನ ಅಧಿಕಾರವನ್ನು ಮೀರಿದೆ ಎಂದು ಗುರುವಾರ ರಾತ್ರಿ ತೀರ್ಪು ಪ್ರಕಟಿಸಿದ್ದು, ವಜಾ ಆದೇಶಕ್ಕೆ ತಡೆಯಾಜ್ಞೆಯನ್ನು ನೀಡಿದೆ.
*******