ಆ.27ರಿಂದ ಭಾರತದ ಮೇಲೆ ಹೆಚ್ಚುವರಿ 25% ಸುಂಕ : ಕರಡು ಸೂಚನೆ ಹೊರಡಿಸಿದ ಅಮೆರಿಕ
Update: 2025-08-26 11:27 IST
ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಈ ಹಿಂದೆ ಘೋಷಿಸಿದಂತೆ ಭಾರತೀಯ ಉತ್ಪನ್ನಗಳ ಮೇಲೆ ಹೆಚ್ಚುವರಿ ಶೇ.25ರಷ್ಟು ಸುಂಕವನ್ನು ಜಾರಿಗೆ ತರುವ ಕುರಿತು ಅಮೆರಿಕ ಕರಡು ಸೂಚನೆಯನ್ನು ಹೊರಡಿಸಿದೆ. ಈ ಹೊಸ ಸುಂಕ 2025ರ ಆಗಸ್ಟ್ 27ರಿಂದ ಜಾರಿಗೆ ಬರಲಿದೆ.
ಭಾರತ ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವ ಕಾರಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್ 7ರಂದು ಭಾರತೀಯ ಸರಕುಗಳ ಮೇಲಿನ ಸುಂಕವನ್ನು 50%ಕ್ಕೆ ದ್ವಿಗುಣಗೊಳಿಸುವುದಾಗಿ ಘೋಷಿಸಿದ್ದರು. ಈಗಾಗಲೇ ಜುಲೈ ಕೊನೆಯಲ್ಲಿ ಘೋಷಿಸಿದ್ದ 25% ಸುಂಕ ಆಗಸ್ಟ್ 7ರಿಂದಲೇ ಜಾರಿಯಾಗಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ನಿಲ್ಲಿಸುವ ತಂತ್ರದ ಭಾಗವಾಗಿ ಟ್ರಂಪ್ ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಈ ಮೊದಲು ಹೇಳಿದ್ದರು.