ಅಮೆರಿಕ ಸೇನಾಪಡೆಯ ವಿಮಾನ ಪತನ
ಸಾಂದರ್ಭಿಕ ಚಿತ್ರ | AP Photo
ಯಕುಶಿಮ (ಜಪಾನ್): ಎಂಟು ಮಂದಿಯನ್ನು ಹೊತ್ತೊಯ್ಯುತ್ತಿದ್ದ ಅಮೆರಿಕಾ ಸೇನಾಪಡೆಯ ವಿ-22 ಆಸ್ಪ್ರೆ ವಿಮಾನವು ಜಪಾನಿನ ಯಕುಶಿಮ ದ್ವೀಪದ ಬಳಿಯ ಸಾಗರದಲ್ಲಿ ಪತನವಾಗಿರುವ ಘಟನೆ ಬುಧವಾರ ನಡೆದಿದೆ.
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನೂ ಸೇರಿದಂತೆ ಘಟನೆಯ ಬಗ್ಗೆ ಇನ್ನಿತರ ಯಾವುದೇ ವಿವರಗಳೂ ತನ್ನ ಬಳಿ ಇಲ್ಲ ಎಂದು ಜಪಾನ್ ಕರಾವಳಿ ಕಾವಲು ಪಡೆಯ ವಕ್ತಾರರೊಬ್ಬರು ಹೇಳಿದ್ದಾರೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಘಟನೆಯು ಸ್ಥಳೀಯ ಸಮಯವಾದ ಮಧ್ಯಾಹ್ನ 2.47ರ ವೇಳೆ ಸಂಭವಿಸಿದೆ. ಅಮೆರಿಕಾ ಸೇನಾಪಡೆ ವಿಮಾನದ ಎಡ ಬದಿಯ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು, ಅದು ಸಾಗರಕ್ಕೆ ಪತನವಾಯಿತು ಎಂದು ಸ್ಥಳೀಯರು ವರದಿ ಮಾಡಿದ್ದಾರೆ.
ಜಪಾನ್ ನಲ್ಲಿ ಆಸ್ಪ್ರೆ ವಿಮಾನಗಳನ್ನು ನಿಯೋಜಿಸಿರುವುದರ ಕುರಿತು ವಿವಾದ ಸೃಷ್ಟಿಯಾಗಿದ್ದು, ಈ ಹೈಬ್ರಿಡ್ ವಿಮಾನವು ಅಪಘಾತಗಳಿಗೆ ಸುಲಭವಾಗಿ ಈಡಾಗುತ್ತದೆ ಎಂದು ಟೀಕಾಕಾರರು ಹೇಳುತ್ತಿದ್ದಾರೆ. ಆದರೆ, ಈ ವಿಮಾನವು ಸುರಕ್ಷಿತ ಎಂದು ಅಮೆರಿಕಾ ಸೇನಾಪಡೆ ಹಾಗೂ ಜಪಾನ್ ಪ್ರತಿಪಾದಿಸುತ್ತಿವೆ.