×
Ad

ಪರಮಾಣು ಸೌಲಭ್ಯಗಳ ಹಾನಿಗೆ ಅಮೆರಿಕ ಪರಿಹಾರ ನೀಡಬೇಕು: ಪರಮಾಣು ಮಾತುಕತೆ ಮುಂದುವರಿಸಲು ಇರಾನ್ ಷರತ್ತು

Update: 2025-07-11 21:32 IST

ಸಾಂದರ್ಭಿಕ ಚಿತ್ರ | PTI 

ಟೆಹ್ರಾನ್: ಯಾವುದೇ ದಾಳಿ ನಡೆಸುವುದಿಲ್ಲ ಎಂದು ಅಮೆರಿಕ ಖಾತರಿ ಪಡಿಸಿದರೆ ಮತ್ತು ಕಳೆದ ತಿಂಗಳು ಅಮೆರಿಕ ನಡೆಸಿದ ದಾಳಿಯಿಂದ ತನ್ನ ಪರಮಾಣು ಮೂಲಸೌಕರ್ಯಗಳಿಗೆ ಆಗಿರುವ ಹಾನಿಗೆ ಪರಿಹಾರ ಒದಗಿಸಲು ಒಪ್ಪಿದರೆ ಮಾತ್ರ ಪರಮಾಣು ಮಾತುಕತೆ ಮುಂದುವರಿಸಬಹುದು ಎಂದು ಇರಾನ್ ಶುಕ್ರವಾರ ಸ್ಪಷ್ಟಪಡಿಸಿದೆ.

`ರಾಜತಾಂತ್ರಿಕ ಮಾರ್ಗ ಮುಚ್ಚಿಲ್ಲ. ಆದರೆ ಇದು ದ್ವಿಮುಖ ರಸ್ತೆಯಾಗಿದೆ. ಅಮೆರಿಕವು ತನ್ನ ಕಾರ್ಯಗಳಿಗೆ, ವಿಶೇಷವಾಗಿ ಅಂತರಾಷ್ಟ್ರೀಯ ಪರಮಾಣು ಸಂಸ್ಥೆ(ಐಎಇಎ)ಯ ಮೇಲ್ವಿಚಾರಣೆಯಲ್ಲಿರುವ ಪರಮಾಣು ಸೌಲಭ್ಯಗಳನ್ನು ಗುರಿಯಾಗಿಸಿದ ದಾಳಿಗೆ, ಜವಾಬ್ದಾರಿಯನ್ನು ತೋರಿಸಬೇಕು ಎಂದು ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಆಗ್ರಹಿಸಿದ್ದಾರೆ. ಜೂನ್ 13ರಿಂದ 25ರವರೆಗೆ ನಡೆದ ವೈಮಾನಿಕ ದಾಳಿಯಲ್ಲಿ ಇರಾನಿನ ಪರಮಾಣು ಕಾರ್ಯಕ್ರಮಗಳು ನಾಶಗೊಂಡಿವೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದನೆಯನ್ನು ತಿರಸ್ಕರಿಸಿದ ಅವರು `ಪರಮಾಣು ಕಾರ್ಯಕ್ರಮಗಳು ನಾಶಗೊಂಡಿಲ್ಲ, ಆದರೆ ಕೆಲ ತಿಂಗಳು ವಿಳಂಬಗೊಂಡಿರಬಹುದು' ಎಂಬ ಐಎಇಎ ಪ್ರಧಾನ ನಿರ್ದೇಶಕ ರಫೇಲ್ ಗ್ರಾಸಿ ಅವರ ಹೇಳಿಕೆಯನ್ನು ಉಲ್ಲೇಖಿಸಿದರು.

ಅಮೆರಿಕದ ದಾಳಿಯ ಬಳಿಕ ನಮ್ಮ ಶಾಂತಿಯುತ ಪರಮಾಣು ಕಾರ್ಯಕ್ರಮಗಳಿಗೆ ತೀವ್ರ ಹಾನಿಯಾಗಿದ್ದು ಹಾನಿಯ ಪ್ರಮಾಣವನ್ನು ಮೌಲ್ಯಮಾಪನ ಮಾಡುತ್ತಿದ್ದೇವೆ. ಇದಕ್ಕೆ ಪರಿಹಾರ ಪಡೆಯಲು ನಮಗೆ ಹಕ್ಕು ಇದೆ. ಇಂಧನ, ವೈದ್ಯಕೀಯ ಮತ್ತು ಕೃಷಿ ಅಗತ್ಯಗಳಿಗೆ ಪೂರಕವಾದ ಶಾಂತಿಯುತ ಪರಮಾಣು ಕಾರ್ಯಕ್ರಮವನ್ನು ಒಂದು ರಾಷ್ಟ್ರ ತ್ಯಜಿಸುತ್ತದೆ ಎಂಬ ಕಲ್ಪನೆಯೇ ತಪ್ಪು ಲೆಕ್ಕಾಚಾರವಾಗಿದೆ. ವೈಜ್ಞಾನಿಕ ಪ್ರಗತಿಯನ್ನು ಸಾಧಿಸಿದ ಜನರ ಇಚ್ಛಾಶಕ್ತಿಯನ್ನು ಬಾಂಬ್‍ ಗಳಿಂದ ನಾಶಪಡಿಸಲು ಆಗುವುದಿಲ್ಲ. ಇರಾನಿನ ಪರಮಾಣು ಕಾರ್ಯಕ್ರಮಗಳು ಐಎಇಎ ಮೇಲ್ವಿಚಾರಣೆ ಹಾಗೂ ಅಂತರಾಷ್ಟ್ರೀಯ ಕಾನೂನು ಚೌಕಟ್ಟಿನಡಿಯೇ ಉಳಿಯುತ್ತದೆ ಎಂದು ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ.

ಯುರೇನಿಯಂ ಪುಷ್ಟೀಕರಣ(ಸಮೃದ್ಧಿಗೊಳಿಸುವುದು) ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅರಾಘ್ಚಿ `ಇರಾನ್ `ಪರಮಾಣು ಪ್ರಸರಣ ತಡೆ ಒಪ್ಪಂದ(ಎನ್‍ಪಿಟಿ)ದಡಿ ತನ್ನ ಹಕ್ಕುಗಳ ವ್ಯಾಪ್ತಿಯೊಳಗೆ ಕಾರ್ಯನಿರ್ವಹಿಸುತ್ತಿದೆ ಮತ್ತು ನಮ್ಮ ಪರಮಾಣು ಕಾರ್ಯಕ್ರಮಗಳು ನಾಗರಿಕ ಉದ್ದೇಶವನ್ನು ಹೊಂದಿವೆ. ಈ ಕುರಿತ ವಿವರದ ಬಗ್ಗೆ ಚರ್ಚೆ ನಡೆಸಬಹುದು. ಆದರೆ ಯುರೇನಿಯಂ ಪುಷ್ಟೀಕರಣದ ಸಿದ್ಧಾಂತವು ಹಕ್ಕು ಮತ್ತು ಅವಶ್ಯಕತೆಯಾಗಿದೆ' ಎಂದರು. ಎನ್‍ಪಿಟಿಯಿಂದ ಹಿಂದೆ ಸರಿಯುವ ಉದ್ದೇಶ ಇರಾನಿಗೆ ಇಲ್ಲ ಎಂದು ಅವರು ಇದೇ ಸಂದರ್ಭ ಸ್ಪಷ್ಟಪಡಿಸಿರುವುದಾಗಿ ವರದಿಯಾಗಿದೆ.

► ಅಂತರಾಷ್ಟ್ರೀಯ ಕಾನೂನಿನ ಮೇಲೆ ದಾಳಿ

ಜಾಗತಿಕ ಪ್ರಸರಣ ನಿರೋಧ ವ್ಯವಸ್ಥೆಯು ನಿಜವಾಗಿಯೂ ಅಪಾಯದಲ್ಲಿದೆ. ಐಎಇಎ ಮೇಲ್ವಿಚಾರಣೆಯಡಿ ಇರುವ ಪರಮಾಣು ಸೌಲಭ್ಯಗಳ ಮೇಲಿನ ದಾಳಿಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಖಂಡಿಸದೆ ಇರುವುದು ಅಂತರಾಷ್ಟ್ರೀಯ ಕಾನೂನಿನ ಮೇಲಿನ ದಾಳಿಗೆ ಸಮವಾಗಿದೆ ಎಂದು ಅರಾಘ್ಚಿ ಖಂಡಿಸಿದ್ದಾರೆ.

ಮಧ್ಯವರ್ತಿ ದೇಶಗಳ ಮೂಲಕ ರಾಜತಾಂತ್ರಿಕ ಮಾರ್ಗಗಳು ಈಗಲೂ ತೆರೆದಿದೆ. ಮಿತ್ರರಾಷ್ಟ್ರಗಳು ಅಥವಾ ಮಧ್ಯವರ್ತಿ ದೇಶಗಳ ಮೂಲಕ ಚರ್ಚೆ ನಡೆಯುತ್ತಿದೆ. ಇರಾನ್ ಯಾವತ್ತೂ ಮಾತುಕತೆಯನ್ನು ಗೌರವಿಸುತ್ತದೆ ಮತ್ತು ಯಾವತ್ತೂ ಈ ತತ್ವವನ್ನು ಉಲ್ಲಂಘಿಸಿಲ್ಲ ಎಂದವರು ದೃಢಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News