ಕಳೆದ 72 ಗಂಟೆಗಳಲ್ಲಿ ಇರಾನ್ ನ 200 ನೆಲೆಗಳ ಮೇಲೆ ದಾಳಿ: ಅಮೆರಿಕ
Photo Credit : aljazeera.com
ಹೊಸದಿಲ್ಲಿ: ಕಳೆದ 72 ಗಂಟೆಗಳಲ್ಲಿ ಇರಾನ್ ನ ಸುಮಾರು 200 ನೆಲೆಗಳ ಮೇಲೆ ದಾಳಿ ನಡೆಸಿರುವುದಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ. ಈ ದಾಳಿಗಳಲ್ಲಿ ಇರಾನ್ ನ ಹಲವು ಸೈನಿಕ ಮೂಲಸೌಕರ್ಯಗಳು ಹಾಗೂ ಕ್ಷಿಪಣಿ ಸಂಬಂಧಿತ ನೆಲೆಗಳು ಸೇರಿವೆ.
ಕೇವಲ ಕೊನೆಯ ಒಂದು ಗಂಟೆಯಲ್ಲೇ ಅಮೆರಿಕದ B–2 ಬಾಂಬರ್ ವಿಮಾನಗಳು ಭೂಗರ್ಭದಲ್ಲಿ ಆಳವಾಗಿ ಹೂತುಹೋಗಿರುವ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ಡಝನ್ಗಟ್ಟಲೆ ‘ಬಂಕರ್–ಬಸ್ಟರ್’ ಬಾಂಬ್‌ಗಳನ್ನು ಬೀಳಿಸಿವೆ ಎಂದು CENTCOM ತಿಳಿಸಿದೆ.
ಇದರ ಜೊತೆಗೆ, ಇರಾನ್ ನ ಸ್ಪೇಸ್ ಕಮಾಂಡ್ ಗೆ ಸಮಾನವಾದ ಮಿಲಿಟರಿ ವ್ಯವಸ್ಥೆಯನ್ನೂ ಅಮೆರಿಕದ ಪಡೆಗಳು ಹೊಡೆದುರುಳಿಸಿರುವುದಾಗಿ CENTCOM ಹೇಳಿದೆ.
ಸಂಘರ್ಷದ ಮೊದಲ ದಿನದಿಂದ ಇರಾನ್ ನಡೆಸುತ್ತಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗಳ ಪ್ರಮಾಣ ಈಗಾಗಲೇ ಶೇಕಡಾ 90ರಷ್ಟು ಕಡಿಮೆಯಾಗಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದ ದಾಳಿಗಳ ಪರಿಣಾಮವಾಗಿ ಈಗ ಬೆಂಕಿಗಾಹುತಿಯಾಗಿರುವ ಡ್ರೋನ್ ವಾಹಕ ಹಡಗು ಸೇರಿದಂತೆ 30 ಕ್ಕೂ ಹೆಚ್ಚು ಇರಾನಿನ ಹಡಗುಗಳನ್ನು ಮುಳುಗಿಸಲಾಗಿದೆ ಎಂದು ಅದು ಮಾಹಿತಿ ನೀಡಿದೆ.
ಮುಂದಿನ ಹಂತದ ಕಾರ್ಯಾಚರಣೆಗಳಲ್ಲಿ ಇರಾನ್ ನ ಕ್ಷಿಪಣಿ ಉತ್ಪಾದನಾ ಸಾಮರ್ಥ್ಯವನ್ನು ಕಿತ್ತುಹಾಕುವತ್ತ ಗಮನಹರಿಸಲಾಗುತ್ತದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.