×
Ad

ಪಶ್ಚಿಮ ಏಷ್ಯಾ ಸಂಘರ್ಷ: ಪರ್ಶಿಯನ್ ಕೊಲ್ಲಿಯಲ್ಲಿ ಸಿಲುಕಿಕೊಂಡ 38 ಭಾರತೀಯ ಹಡಗುಗಳು!

ಮೂವರು ಭಾರತೀಯ ನಾವಿಕರು ಮೃತ್ಯು: ದೃಢಪಡಿಸಿದ ಶಿಪ್ಪಿಂಗ್ ಅಧಿಕಾರಿಗಳು

Update: 2026-03-04 08:40 IST

PC: x.com/firstpost

ಹೊಸದಿಲ್ಲಿ/ ಮುಂಬೈ: ಇರಾನ್-ಅಮೆರಿಕ-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಬಹುತೇಕ ಕಚ್ಚಾತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಸಾಗಾಣಿಕೆ ಮಾಡುತ್ತಿರುವ ಭಾರತೀಯ ಧ್ವಜ ಹೊಂದಿರುವ 38 ಹಡಗುಗಳು ಸಂಘರ್ಷಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿವೆ. ಸುಮಾರು 1100 ನಾವಿಕರು ಪರ್ಶಿಯನ್ ಕೊಲ್ಲಿಯಲ್ಲಿ ಅಪಾಯದಲ್ಲಿದ್ದಾರೆ.

ಒಮಾನ್ ಬಂದರಿನ ಮೇಲೆ ನಡೆದ ದಾಳಿಯಲ್ಲಿ ವಿದೇಶಿ ಹಡಗುಗಳಲ್ಲಿದ್ದ ಮೂವರು ಭಾರತೀಯ ನಾವಿಕರು ಮೃತಪಟ್ಟಿರುವುದನ್ನು ಶಿಪ್ಪಿಂಗ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಸಂಘರ್ಷಪೀಡಿತ ಪ್ರದೇಶಗಳಲ್ಲಿ ವಿವಿಧ ದೇಶಗಳ ಹಡಗುಗಳಲ್ಲಿ 23 ಸಾವಿರ ಭಾರತೀಯ ನಾವಿಕರು ಸಂಕಷ್ಟದಲ್ಲಿದ್ದಾರೆ. ಅವರ ಸುರಕ್ಷತೆ ಸರ್ಕಾರದ ಆದ್ಯತೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಫಿಲಿಫೀನ್ಸ್ ಮತ್ತು ಚೀನಾ ಹೊರತುಪಡಿಸಿದರೆ ಭಾರತ ಮೂರನೇ ಅತಿದೊಡ್ಡ ನಾವಿಕರನ್ನು ಪೂರೈಸುವ ದೇಶವಾಗಿದೆ.

ಮಂಗಳವಾರ ಪರಿಶೀಲನಾ ಸಭೆ ನಡೆಸಿರುವ ಶಿಪ್ಪಿಂಗ್ ಖಾತೆ ಸಚಿವ ಸರ್ಬಾನಂದ ಸೋನೊವಾಲ್ ಅವರು ಶಿಪ್ಪಿಂಗ್ ಮಹಾ ನಿರ್ದೇಶಕರು ಸೇರಿದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ, ಭಾರತೀಯ ನಾವಿಕರ ಸುರಕ್ಷತೆ ಮತ್ತು ಕಲ್ಯಾಣಕ್ಕೆ ಹಾಗೂ ಸಾಗರ ಆಸ್ತಿಗಳ ಭದ್ರತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಿದರು.

ಭಾರತೀಯ ಹಡಗುಗಳನ್ನು ವಶಪಡಿಸಿಕೊಂಡಿರುವ ಅಥವಾ ಯಾವುದೇ ಸಾವು ನೋವಿನ ವರದಿ ಇದುವರೆಗೆ ಬಂದಿಲ್ಲ ಎಂದು ಅಧಿಕೃತ ಪ್ರಕಟಣೆ ಹೇಳಿದೆ.

ಶಿಪ್ಪಿಂಗ್ ಮಹಾನಿರ್ದೇಶಕರು ಸಚಿವರು ಹಾಗೂ ಅಧಿಕಾರಿಗಳಿಗೆ ಇಡೀ ಪರಿಸ್ಥಿತಿಯ ಬಗ್ಗೆ ಮತ್ತು ಭಾರತೀಯ ಹಡಗುಗಳ ಸ್ಥಿತಿಗತಿ ಬಗ್ಗೆ ವಿವರ ನೀಡಿದರು. ಹೊರ್ಮುಝ್ ಸಂಧಿಯ ಪಶ್ಚಿಮದಲ್ಲಿ 24 ಹಾಗೂ ಪೂರ್ವದಲ್ಲಿ 14 ಭಾರತೀಯ ಹಡಗುಗಳು ಸಿಲುಕಿಕೊಂಡಿವೆ ಎಂದು ಸಚಿವಾಲಯಕ್ಕೆ ಅಧಿಕಾರಿಗಳು ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News