×
Ad

ನ್ಯೂಯಾರ್ಕ್ ಕಾರ್ಯಕ್ರಮದಲ್ಲಿ ಉಮರ್ ಖಾಲಿದ್ ರ ಜೈಲು ಡೈರಿಯನ್ನು ಓದಿದ್ದ ಝೊಹ್ರಾನ್ ಮಮ್ದಾನಿ!

Update: 2025-11-06 19:27 IST

 ಝೊಹ್ರಾನ್ ಮಮ್ದಾನಿ |Photo Credit : PTI

ನ್ಯೂಯಾರ್ಕ್: 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ವೇತ ಭವನಕ್ಕೆ ಭೇಟಿ ನೀಡುವುದಕ್ಕೂ ಮುನ್ನ ಝೊಹ್ರಾನ್ ಮಮ್ದಾನಿ, “ಹೌದಿ, ಡೆಮಾಕ್ರಸಿ?” ಎಂದು ಪ್ರಶ್ನಿಸಿ, ಸೆರೆವಾಸದಲ್ಲಿರುವ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ವಾಂಸ ಹಾಗೂ ಮಾಜಿ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್ ರ ಪತ್ರ ಓದಿದ್ದ ಘಟನೆ, ಇದೀಗ ಅವರು ನ್ಯೂಯಾರ್ಕ್ ಮೇಯರ್ ಆಗಿ ಆಯ್ಕೆಯಾದ ಬಳಿಕ ಮುನ್ನೆಲೆಗೆ ಬಂದಿದೆ.

ಆ ಕಾರ್ಯಕ್ರಮದಲ್ಲಿ ಅವರು ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ವಾಂಸ ಉಮರ್ ಖಾಲಿದ್ ಅವರ ಪತ್ರವನ್ನು ಸಭಿಕರೆದುರು ಓದಿದ್ದರು.

“ನಾನೀಗ ದಿಲ್ಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ವಾಂಸ ಹಾಗೂ ಮಾಜಿ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್ ಅವರ ಪತ್ರವನ್ನು ಓದಲಿದ್ದೇನೆ. ಅವರು ಗುಂಪು ಹತ್ಯೆ ಹಾಗೂ ದ್ವೇಷದ ವಿರುದ್ಧ ಅಭಿಯಾನ ಕೈಗೊಂಡಿದ್ದರು. ಅವರು ಯುಎಪಿಎ ಕಾಯ್ದೆಯಡಿ ಕಳೆದ 1,000ಕ್ಕೂ ಹೆಚ್ಚು ದಿನಗಳಿಂದ ಜೈಲಿನಲ್ಲಿದ್ದು, ಅವರ ಜಾಮೀನು ಅರ್ಜಿಯನ್ನು ಪದೇ ಪದೇ ವಜಾಗೊಳಿಸಲಾಗುತ್ತಿದ್ದರೂ, ಅವರ ವಿಚಾರಣೆಯಿನ್ನೂ ಆರಂಭಗೊಂಡಿಲ್ಲ. ಅವರ ಹತ್ಯೆಯ ಪ್ರಯತ್ನ ಕೂಡಾ ನಡೆದಿತ್ತು” ಎಂದು ಝೊಹರ್ ಮಮ್ದಾನಿ ಸಭೀಕರನ್ನು ಉದ್ದೇಶಿಸಿ ಹೇಳಿದ್ದರು.

2023ರ ಜೂನ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅತ್ಯಂತ ಮಹತ್ವದ ವಾಷಿಂಗ್ಟನ್ ಡಿಸಿ ಭೇಟಿಗೂ ಮುನ್ನ, ಭಾರತದಲ್ಲಿನ ಪ್ರಜಾಪ್ರಭುತ್ವ ಮತ್ತು ನಾಗರಿಕ ಸ್ವಾತಂತ್ರ್ಯದ ಕುರಿತಂತೆ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು.

ಈ ವರ್ಷದ ಆರಂಭದಲ್ಲಿ ಮತ್ತೊಂದು ಪ್ರತ್ಯೇಕ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರೊಂದಿಗೆ ಹೋಲಿಕೆ ಮಾಡಿದ್ದಕ್ಕೆ ಗುಜರಾತ್ ಮೂಲದವರೇ ಆದ ಝೊಹ್ರಾನ್ ಮಮ್ದಾನಿ ಅವರು ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ತೀವ್ರ ಟೀಕೆಗೆ ಗುರಿಯಾಗಿದ್ದರು.

ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿರುವ ಭಾರತದ ನಾಯಕ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನೀವು ಕಾಣಿಸಿಕೊಳ್ಳಲಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು 2002ರ ಗುಜರಾತ್ ಗಲಭೆಯನ್ನು ಉಲ್ಲೇಖಿಸಿದ್ದರು.

ಪ್ರಚೋದನಕಾರಿ ಹೇಳಿಕೆ ಹಾಗೂ 2020ರಲ್ಲಿ ನಡೆದಿದ್ದ ದಿಲ್ಲಿ ಗಲಭೆಗೆ ಸಂಬಂಧಿಸಿದಂತೆ ಪಿತೂರಿ ನಡೆಸಲಾಗಿದೆ ಎಂಬ ಆರೋಪದ ಮೇಲೆ ಸೆಪ್ಟೆಂಬರ್ 2020ರಲ್ಲಿ ಉಮರ್ ಖಾಲಿದ್ ಅವರನ್ನು ಬಂಧಿಸಲಾಗಿತ್ತು. ವಿಚಾರಣಾ ನ್ಯಾಯಾಲಯ ಹಾಗೂ ದಿಲ್ಲಿ ಹೈಕೋರ್ಟ್ ಎರಡರಿಂದಲೂ ಎರಡು ಬಾರಿ ವಜಾಗೊಂಡಿದ್ದ ಉಮರ್ ಖಾಲಿದ್ ರ ಜಾಮೀನು ಅರ್ಜಿ ವಿಚಾರಣೆಯನ್ನು ಗುರುವಾರ ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News