ಮಿಲಿಟರಿ ಹಿಡಿತ ಕಳೆದುಕೊಂಡರೇ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್?
ಸಾಂದರ್ಭಿಕ ಚಿತ್ರ (credit: AP)
ಇತ್ತೀಚಿನ ದಿನಗಳಲ್ಲಿ ಚೀನಾದ ರಾಜಕೀಯ ಮತ್ತು ಮಿಲಿಟರಿ ವಲಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಜಗತ್ತಿನಾದ್ಯಂತ ತೀವ್ರ ಕುತೂಹಲ ಮತ್ತು ಆತಂಕವನ್ನು ಮೂಡಿಸಿವೆ.
ಅದರಲ್ಲೂ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಕೆಲವು ನಿರ್ಧಾರಗಳು ಮತ್ತು ಅವರ ಆಪ್ತರೆಂದು ಪರಿಗಣಿಸಲ್ಪಟ್ಟವರು ದಿಢೀರ್ ನಾಪತ್ತೆಯಾಗಿರುವ ವಿಚಾರಗಳು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮೊದಲನೆಯದಾಗಿ, ಕ್ಸಿ ಜಿನ್‌ಪಿಂಗ್ ಅವರು ಇತ್ತೀಚೆಗೆ ರಿಯೋ ಡಿ ಜನೈರೊದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಗೆ ಗೈರುಹಾಜರಾಗಿದ್ದು ಅನೇಕ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. 2013 ರಲ್ಲಿ ಅಧ್ಯಕ್ಷರಾದ ನಂತರ ಅವರು ಯಾವುದೇ ಬ್ರಿಕ್ಸ್ ಶೃಂಗಸಭೆಯನ್ನು ತಪ್ಪಿಸಿದ್ದು ಇದೇ ಮೊದಲು. ಅವರ ಅನುಪಸ್ಥಿತಿಯು ಅವರ ಆರೋಗ್ಯದ ಬಗ್ಗೆ ಮತ್ತು ದೇಶದ ಆಂತರಿಕ ಪರಿಸ್ಥಿತಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇದರ ಬೆನ್ನಲ್ಲೇ, ಕ್ಸಿ ಜಿನ್‌ಪಿಂಗ್ ಅವರು ಕಮ್ಯುನಿಸ್ಟ್ ಪಕ್ಷದ ಪ್ರಮುಖ ಸಂಸ್ಥೆಗಳಿಗೆ ಅಧಿಕಾರವನ್ನು ವರ್ಗಾಯಿಸುತ್ತಿದ್ದಾರೆ ಎಂಬ ವರದಿಗಳು ಬಂದಿವೆ. ಜೂನ್ 30 ರಂದು ನಡೆದ ಪಾಲಿಟ್ ಬ್ಯೂರೊ ಸಭೆಯಲ್ಲಿ ಹೊಸ ನಿಯಮಗಳನ್ನು ಪರಿಶೀಲಿಸಲಾಗಿದ್ದು, ಈ ಸಂಸ್ಥೆಗಳು ಪ್ರಮುಖ ರಾಷ್ಟ್ರೀಯ ವಿಷಯಗಳ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಮತ್ತು ಸಮನ್ವಯ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಹೇಳಲಾಗಿದೆ.
ಈ ಕ್ರಮವು ಮೇಲ್ನೋಟಕ್ಕೆ ಆಡಳಿತವನ್ನು ಸುಗಮಗೊಳಿಸುವ ಉದ್ದೇಶವನ್ನು ಹೊಂದಿದ್ದರೂ, ಇದು ಕ್ಸಿ ಅವರು ತಮ್ಮ ಅಧಿಕಾರವನ್ನು ಹಂಚಿಕೊಳ್ಳಲು ಅಥವಾ ನಿವೃತ್ತಿಗೆ ತಯಾರಿ ನಡೆಸಲು ಮಾಡುತ್ತಿರುವ ತಂತ್ರಗಾರಿಕೆಯ ಭಾಗವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.
ಆದರೆ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವುದು ಚೀನಾದ ಮಿಲಿಟರಿಯಲ್ಲಿ ನಡೆಯುತ್ತಿರುವ ಬದಲಾವಣೆಗಳು. ಕ್ಸಿ ಜಿನ್‌ಪಿಂಗ್ ಅವರ ಕಟ್ಟಾ ನಿಷ್ಠಾವಂತರೆಂದು ಗುರುತಿಸಿಕೊಂಡಿದ್ದ ಜನರಲ್ ಹಿ ವೇಡಾಂಗ್ ಅವರು ಮಾರ್ಚ್ 11 ರ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.
Financial times ವರದಿಯ ಪ್ರಕಾರ, ಅಮೆರಿಕದ ಗುಪ್ತಚರ ಅಧಿಕಾರಿಗಳು ಜನರಲ್ ಹಿ ಅವರನ್ನು ಪೀಪಲ್ಸ್ ಲಿಬರೇಶನ್ ಆರ್ಮಿ ಮತ್ತು ಕಮ್ಯುನಿಸ್ಟ್ ಪಕ್ಷದ ಹುದ್ದೆಗಳಿಂದ ವಜಾ ಮಾಡಲಾಗಿದೆ ಎಂದು ನಂಬಿದ್ದಾರೆ.
ಅಷ್ಟೇ ಅಲ್ಲದೆ, ಅವರು ಮೇ ತಿಂಗಳಲ್ಲಿ ನಿಧನರಾದರು ಎಂಬ ವದಂತಿಗಳೂ ಹರಿದಾಡುತ್ತಿವೆ. ಆದರೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಈ ಬೆಳವಣಿಗೆಯು ಕ್ಸಿ ಅವರ ಮಿಲಿಟರಿಯ ಮೇಲಿನ ಹಿಡಿತ ಸಡಿಲವಾಗುತ್ತಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಜನರಲ್ ಹಿ ವೇಡಾಂಗ್ ಒಬ್ಬರೇ ಅಲ್ಲ. ಇತ್ತೀಚಿನ ದಿನಗಳಲ್ಲಿ ಹಲವಾರು ಉನ್ನತ ಮಿಲಿಟರಿ ಅಧಿಕಾರಿಗಳು ನಿಗೂಢವಾಗಿ ಕಣ್ಮರೆಯಾಗಿದ್ದಾರೆ.
ರಕ್ಷಣಾ ಮಂತ್ರಿ ಜನರಲ್ ಲಿ ಶಾಂಗ್ಫು, ಅವರ ಹಿಂದಿನ ರಕ್ಷಣಾ ಮಂತ್ರಿ ಜನರಲ್ ವೇ ಫೆಂಘೆ ಮತ್ತು ಸಿಬ್ಬಂದಿ ಮತ್ತು ಸೈದ್ಧಾಂತಿಕ ತಪಾಸಣೆಯ ಮುಖ್ಯಸ್ಥ ಜನರಲ್ ಮಿಯಾವೊ ಹುವಾ ಕೂಡಾ ಕೆಲವು ತಿಂಗಳುಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಈ ಅಧಿಕಾರಿಗಳೆಲ್ಲರೂ ಕ್ಸಿ ಜಿನ್‌ಪಿಂಗ್ ಅವರ ಆಪ್ತ ವಲಯಕ್ಕೆ ಸೇರಿದವರಾಗಿದ್ದರು ಎಂದು ಹೇಳಲಾಗಿದೆ.
ಈ ಬದಲಾವಣೆಗಳ ಕುರಿತು ವಿಭಿನ್ನ ವ್ಯಾಖ್ಯಾನಗಳು ಕೇಳಿಬರುತ್ತಿವೆ. ಕೆಲವರು ಕ್ಸಿ ಜಿನ್‌ಪಿಂಗ್ ಅವರು ಮಿಲಿಟರಿಯಲ್ಲಿನ ಭ್ರಷ್ಟಾಚಾರವನ್ನು ಮಟ್ಟಹಾಕಲು ಮತ್ತು ತಮ್ಮ ನಿಯಂತ್ರಣವನ್ನು ಬಲಪಡಿಸಲು ಇಂತಹ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ವಾದಿಸುತ್ತಾರೆ.
ಏಷ್ಯಾ ಸೊಸೈಟಿ ಪಾಲಿಸಿ ಇನ್‌ಸ್ಟಿಟ್ಯೂಟ್‌ನ ನೀಲ್ ಥಾಮಸ್ ಅವರ ಪ್ರಕಾರ, ಕ್ಸಿ ಅವರು ಪಿಎಲ್‌ಎ ಅನ್ನು ಚೀನಾದ ಗಡಿಗಳನ್ನು ಮೀರಿ ಪರಿಣಾಮಕಾರಿ ಹೋರಾಟದ ಪಡೆ ಆಗಿ ಪರಿವರ್ತಿಸಲು ಮತ್ತು ತಮ್ಮ ದೇಶೀಯ ಕಾರ್ಯಸೂಚಿಗೆ ಸಂಪೂರ್ಣವಾಗಿ ಬದ್ಧವಾಗಿರುವಂತೆ ಮಾಡಲು ಬಯಸುತ್ತಿದ್ದಾರೆ.
ಆದರೆ ಮತ್ತೊಂದೆಡೆ, ಪ್ರೇಗ್ ಮೂಲದ ಸಿನೊಪ್ಸಿಸ್ ಥಿಂಕ್ ಟ್ಯಾಂಕ್‌ನ ಚಾರ್ಲ್ಸ್ ಬರ್ಟನ್ ಅವರಂತಹ ವಿಶ್ಲೇಷಕರು ಕ್ಸಿ ಅವರು ರಾಜಕೀಯ ವ್ಯವಸ್ಥೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದರೆ ಅವರ ಬೆಂಬಲಿಗರನ್ನು ಏಕೆ ವಜಾ ಮಾಡಲಾಗುತ್ತಿದೆ ಎಂದು ಪ್ರಶ್ನಿಸುತ್ತಾರೆ. ಕೆಲವೊಮ್ಮೆ ಸರಳವಾದ ವಿವರಣೆಗಳು ಹೆಚ್ಚು ವಿಶ್ವಾಸಾರ್ಹವಾಗಿರುತ್ತವೆ ಎಂದು ಅವರು ಹೇಳುತ್ತಾರೆ.
ಅವರ ಪ್ರಕಾರ, ಕ್ಸಿ ಅವರ ವಿರೋಧಿಗಳು ಕ್ಸಿ ಅವರ ನಿಷ್ಠಾವಂತರನ್ನು ಗುರಿಯಾಗಿಸಿಕೊಂಡು ಅಧಿಕಾರವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿರಬಹುದು.
ಇದಕ್ಕೆ ಪುಷ್ಟಿ ನೀಡುವಂತೆ, ಜುಲೈ 9, 2024 ರಿಂದ ಪಿಎಲ್‌ಎ ಡೈಲಿ ಎಂಬ ಚೀನಾದ ಮಿಲಿಟರಿಯ ಅಧಿಕೃತ ಪ್ರಚಾರ ವಿಭಾಗವು, "ಸಾಮೂಹಿಕ ನಾಯಕತ್ವ"ವನ್ನು ಹೊಗಳುವ ಲೇಖನಗಳ ಸರಣಿಯನ್ನು ಪ್ರಕಟಿಸಿತು ಎಂದು ಜೇಮ್ಸ್ ಟೌನ್ ಫೌಂಡೇಶನ್ ವರದಿ ಮಾಡಿದೆ. ಇದು ಕ್ಸಿ ಅವರ ಸಂಪೂರ್ಣ ವಿಧೇಯತೆಯ ಬೇಡಿಕೆಯನ್ನು ಸ್ಪಷ್ಟವಾಗಿ ಟೀಕಿಸಿದಂತೆ ಕಾಣುತ್ತದೆ.
ಈ ಲೇಖನಗಳು ಮಿಲಿಟರಿಯ ಉನ್ನತ ಶ್ರೇಣಿಯ ಅಧಿಕಾರಿ ಮತ್ತು ಕೇಂದ್ರ ಮಿಲಿಟರಿ ಆಯೋಗದ ಉಪಾಧ್ಯಕ್ಷ ಜನರಲ್ ಝಾಂಗ್ ಯುಕ್ಸಿಯಾ ಅವರೊಂದಿಗೆ ಗುರುತಿಸಿಕೊಂಡಿರುವವರಿಂದ ಬರೆಯಲಾಗಿದೆ ಎಂದು ನಂಬಲಾಗಿದೆ. ಕ್ಸಿ ಅವರು ಮಿಲಿಟರಿಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದರೆ ಇಂತಹ ಲೇಖನಗಳು ಪ್ರಕಟವಾಗುವುದು ಸಾದ್ಯವಿರಲಿಲ್ಲ.
ಇದರ ಜೊತೆಗೆ, ಚೀನಾವು ತೀವ್ರ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ. ಅಮೆರಿಕದೊಂದಿಗಿನ ಸುದೀರ್ಘ ವ್ಯಾಪಾರ ಸಮರ, ವಸತಿ ಮಾರುಕಟ್ಟೆಯಲ್ಲಿನ ಕುಸಿತ ಮತ್ತು ವಿವಾದಾತ್ಮಕ ಶೂನ್ಯ ಕೋವಿಡ್ ನೀತಿಯ ಪರಿಣಾಮಗಳು ಆರ್ಥಿಕ ಬೆಳವಣಿಗೆಯನ್ನು ಗಣನೀಯವಾಗಿ ಕುಂಠಿತಗೊಳಿಸಿವೆ. ಈ ಆರ್ಥಿಕ ಒತ್ತಡಗಳು ಕ್ಸಿ ಜಿನ್‌ಪಿಂಗ್ ಅವರ ನಾಯಕತ್ವದ ಮೇಲೆ ಮತ್ತಷ್ಟು ಪರಿಣಾಮ ಬೀರಬಹುದು.
ಚೀನಾದಲ್ಲಿನ ಪರಿಸ್ಥಿತಿಯು ಅನಿಶ್ಚಿತವಾಗಿದೆ ಎಂಬುದು ಸ್ಪಷ್ಟವಾಗಿದೆ. ಕ್ಸಿ ಜಿನ್‌ಪಿಂಗ್ ಅವರ ಅಧಿಕಾರದ ಭವಿಷ್ಯ ಅಸ್ಪಷ್ಟವಾಗಿದೆ. ಈ ಅಸ್ಥಿರತೆಯು ದೇಶದ ಆಂತರಿಕ ರಾಜಕೀಯದ ಮೇಲೆ ಮಾತ್ರವಲ್ಲದೆ, ಪ್ರಾದೇಶಿಕ ಮತ್ತು ಜಾಗತಿಕ ಭದ್ರತೆಯ ಮೇಲೂ ಗಂಭೀರ ಪರಿಣಾಮಗಳನ್ನು ಬೀರಬಹುದು. ಹೀಗಾಗಿ, ವಿಶ್ವ ಸಮುದಾಯವು ಚೀನಾದಲ್ಲಿ ನಡೆಯುತ್ತಿರುವ ಈ ಸೂಕ್ಷ್ಮ ಬೆಳವಣಿಗೆಗಳನ್ನು ಬಹಳ ಎಚ್ಚರಿಕೆಯಿಂದ ಗಮನಿಸುತ್ತಿದೆ.