ಟ್ರಂಪ್ ಮಧ್ಯಸ್ಥಿಕೆಯಿಂದಲೇ ಭಾರತ-ಪಾಕಿಸ್ತಾನ ಯುದ್ಧ ಕೊನೆಗೊಂಡಿತು: ಶ್ವೇತಭವನ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದೇಶಾಂಗ ನೀತಿಯು ಪರಿಣಾಮಕಾರಿಯಾಗಿದೆ ಎಂದು ಹೊಗಳಿರುವ ಶ್ವೇತಭವನ, ಅವರ ಮಧ್ಯಸ್ಥಿಕೆಯ ಫಲವಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ಅಂತ್ಯವಾಗಿದೆ ಎಂದು ತಿಳಿಸಿದೆ.
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, "ಟ್ರಂಪ್ ಅವರ ರಾಜತಾಂತ್ರಿಕ ಮಾರ್ಗಗಳ ಮೂಲಕ ಅವರು ವಿಶ್ವದ ಗಮನ ಸೆಳೆದಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ಅವರು ಮುಕ್ತಾಯಗೊಳಿಸಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧದ ಅಂತ್ಯಕ್ಕಾಗಿ ಕೂಡ ಅವರು ಶ್ರಮಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.
ಇಸ್ರೇಲ್ - ಫೆಲೆಸ್ತೀನ್ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡಲು ಶಾಂತಿ ಮಾತುಕತೆ ಯನ್ನು ಟ್ರಂಪ್ ನಡೆಸುತ್ತಿದ್ದಾರೆ. ಅದರ ಫಲವಾಗಿ ಹಲವಾರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕ್ಯಾರೋಲಿನ್ ಲೀವಿಟ್ ಹೇಳಿದ್ದಾರೆ.
ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತವು 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವೂ ಪ್ರತಿದಾಳಿ ನಡೆಸಿದ ನಂತರ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.
ಈ ಸಂದರ್ಭದಲ್ಲಿ ಅಮೆರಿಕ ಮಧ್ಯಸ್ಥಿಕೆ ವಹಿಸಿ, ಶಾಂತಿ ಚರ್ಚೆಗಳಿಗೆ ವೇದಿಕೆಯಾಗಿದ್ದು, ಕದನ ವಿರಾಮಕ್ಕೆ ಕಾರಣವಾಯಿತು ಎಂದು ಶ್ವೇತಭವನ ಹೇಳಿದೆ. "ಇದು ಟ್ರಂಪ್ ಅವರ ರಾಜತಾಂತ್ರಿಕ ಮುನ್ನಡೆಗಳ ಫಲವಾಗಿದೆ" ಎಂದು ಶ್ವೇತಭವನ ಹೇಳಿದೆ.