ಅಮೆರಿಕದ 'ಅತ್ಯಂತ ಪ್ರೀತಿಯ' ನ್ಯಾಯಾಧೀಶ ಫ್ರಾಂಕ್ ಕ್ಯಾಪ್ರಿಯೊ ನಿಧನ
ರೋಡೆ ಐಲ್ಯಾಂಡ್ (ಅಮೆರಿಕ): ಸಹೃದಯಿ ಹಾಗು ಪ್ರೀತಿಯ ನ್ಯಾಯಾಧೀಶ ಎಂದೇ ಸಾಮಾಜಿಕ ಜಾಲತಾಣದ ಲ್ಲಿ ಜನಪ್ರಿಯರಾಗಿದ್ದ ರೋಡ್ ಐಲ್ಯಾಂಡ್ ನ ನಿವೃತ್ತ ಮುನಿಸಿಪಲ್ ನ್ಯಾಯಾಧೀಶ ಫ್ರಾಂಕ್ ಕ್ಯಾಪ್ರಿಯೊ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಬುಧವಾರ ಅವರ ಅಧಿಕೃತ ಸಾಮಾಜಿಕ ಮಾಧ್ಯಕಮ ಖಾತೆಯಲ್ಲಿ ಅವರ ನಿಧನದ ಸುದ್ದಿ ಪ್ರಕಟವಾಗಿದ್ದು, ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ವಿರುದ್ಧ ದೀರ್ಘಕಾಲದಿಂದ ಹೋರಾಡುತ್ತಿದ್ದ ಅವರು ನಿಧನರಾಗಿದ್ದಾರೆ ಎಂದು ಹೇಳಲಾಗಿದೆ.
ನಿಧನದ ಒಂದು ದಿನ ಮೊದಲು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಮಾಡಿದ್ದ ಫ್ರಾಂಕ್ ಕ್ಯಾಪ್ರಿಯೊ, ನನಗೆ ಆಸ್ಪತ್ರೆಯಲ್ಲಿ ಹಿನ್ನಡೆಯಾಗಿದ್ದು, ನನ್ನನ್ನು ನಿಮ್ಮ ಪ್ರಾರ್ಥನೆಗಳಲ್ಲಿ ಸ್ಮರಿಸಿ ಎಂದು ಹೇಳಿದ್ದರು.
ನ್ಯಾಯಾಲಯದಲ್ಲಿ ಅವರು ನಡೆದುಕೊಳ್ಳುತ್ತಿದ್ದ ರೀತಿ, ತಿಳಿ ಹಾಸ್ಯ ಹಾಗೂ ಅಪಾರ ಪ್ರೀತಿಯ ವರ್ತನೆಗಳನ್ನು ಚಿತ್ರೀಕರಿಸಲಾಗಿದೆ. ಈ ವಿಡಿಯೊಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಕೋಟಿಗಟ್ಟಲೆ ವೀಕ್ಷಣೆ ಸಿಕ್ಕಿದೆ.
ರೋಡ್ ಐಲ್ಯಾಂಡ್ ನಲ್ಲಿ 1936ರಲ್ಲಿ ಇಟಲಿ-ಅಮೆರಿಕನ್ ಕುಟುಂಬದಲ್ಲಿ ಜನಿಸಿದ್ದ ಫ್ರಾಂಕ್ ಕ್ಯಾಪ್ರಿಯೊ, ತಮ್ಮ ಬಹುತೇಕ ಜೀವನವನ್ನು ಇಲ್ಲೇ ಕಳೆದಿದ್ದರು. ನಂತರ ಅವರು ರೋಡ್ ಐಲ್ಯಾಂಡ್ ನ ಮುಖ್ಯ ಮುನಿಸಿಪಲ್ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದರು.
ತಮ್ಮ ಸಹಾನುಭೂತಿಯ ವಿಚಾರಣೆಯಿಂದ ನ್ಯಾಯಾಲಯದ ಆವರಣದಲ್ಲಿ ಭಾರಿ ಪ್ರೀತಿಪಾತ್ರರಾಗಿದ್ದ ಫ್ರಾಂಕ್ ಕ್ಯಾಪ್ರಿಯೊ, ವೈಯಕ್ತಿಕ ಸಮಸ್ಯೆಗಳಿಗೆ ಸಹಾನುಭೂತಿ ತೋರುತ್ತಿದ್ದರು ಹಾಗೂ ತೀರಾ ಕಡಿಮೆ ಅಪರಾಧದ ಪ್ರಕರಣಗಳನ್ನು ಮಾನವೀಯ ನೆಲೆಯಲ್ಲಿ ವಜಾಗೊಳಿಸುತ್ತಿದ್ದರು. ಅವರ ನಡವಳಿಕೆಯು ಅವರಿಗೆ ʼಅಕ್ಕರೆಯ ನ್ಯಾಯಾಧೀಶʼ ಎಂಬ ಮನ್ನಣೆಯನ್ನು ತಂದು ಕೊಟ್ಟಿತ್ತು. 'ಕಾಟ್ ಇನ್ ಪ್ರಾವಿಡೆನ್ಸ್' ಎಂಬ ಅವರ ಕೋರ್ಟ್ ರೂಮ್ ರಿಯಾಲಿಟಿ ಶೋ ಬಹಳ ಖ್ಯಾತಿ ಪಡೆದಿತ್ತು.