ರಶ್ಯದ ಪರ ಚೀನಾ, ಪಾಕ್ ಬಾಡಿಗೆ ಸಿಪಾಯಿಗಳ ಹೋರಾಟ: ಝೆಲೆನ್ಸ್ಕಿ
Update: 2025-08-05 21:06 IST
PC : aljazeera.com
ಕೀವ್, ಆ.5: ಚೀನಾ, ಪಾಕಿಸ್ತಾನ, ತಝಿಕಿಸ್ತಾನ, ಉಜ್ಬೇಕಿಸ್ತಾನ ಮತ್ತು ಆಫ್ರಿಕನ್ ದೇಶಗಳ ಬಾಡಿಗೆ ಸಿಪಾಯಿಗಳು ಈಗ ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ರಶ್ಯದ ಪರ ಹೋರಾಡುತ್ತಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಖಾರ್ಕಿವ್ ಪ್ರಾಂತಕ್ಕೆ ಭೇಟಿ ನೀಡಿ ಉಕ್ರೇನ್ನ ಪಡೆಗಳ ಜೊತೆ ಮಾತುಕತೆ ನಡೆಸಿದ ಝೆಲೆನ್ಸ್ಕಿ `ರಶ್ಯದ ಪರ ಹೋರಾಡುತ್ತಿರುವ ಬಾಡಿಗೆ ಸಿಪಾಯಿಗಳಿಗೆ ನಮ್ಮ ಧೀರ ಯೋಧರು ಸೂಕ್ತ ಪಾಠ ಕಲಿಸಲಿದ್ದಾರೆ. ಮುಂಚೂಣಿ ನೆಲೆಗಳಿಗೆ ಡ್ರೋನ್ ಗಳು ಹಾಗೂ ಕ್ಷಿಪಣಿಗಳ ಪೂರೈಕೆಯನ್ನು ಹೆಚ್ಚಿಸಲಾಗುವುದು ಮತ್ತು ಸೇನೆಗೆ ಯೋಧರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿರುವುದಾಗಿ ವರದಿಯಾಗಿದೆ.
ಈ ಮಧ್ಯೆ, ಮಂಗಳವಾರ ಉಕ್ರೇನ್ನ ಝಪೋರಿಝಿಯಾ ಪ್ರಾಂತದ ಸ್ಟೆಪ್ನೊಹಿಸ್ರ್ಕ್ ಪ್ರದೇಶದಲ್ಲಿ ರಶ್ಯ ನಡೆಸಿದ ದಾಳಿಯಲ್ಲಿ ಮೂವರು ಸಾವನ್ನಪ್ಪಿರುವುದಾಗಿ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.