×
Ad

ಅಫಜಲಪುರ | ಸಾರಿಗೆ ಬಸ್ ಪಲ್ಟಿ : ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು

Update: 2026-01-25 19:46 IST

ಅಫಜಲಪುರ: ತಾಲೂಕಿನ ಬಿದನೂರ ಗ್ರಾಮದ ಸಮೀಪ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್ಸೊಂದು ಆಕಸ್ಮಿಕವಾಗಿ ರಸ್ತೆ ಬದಿಗೆ ಉರುಳಿ ಬಿದ್ದ ಘಟನೆ ರವಿವಾರ ಸಂಭವಿಸಿದೆ. ಬಸ್ಸಿನಲ್ಲಿ ಸುಮಾರು 15ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಸ್ಸಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ದೇವಲಗಾಣಪೂರ ಪೊಲೀಸ್ ಠಾಣೆಯ ಪಿಎಸ್‌ಐ ಸಂಗೀತಾ ಶಿಂಧೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಮಾತನಾಡಿದ ಅವರು, “ಬಸ್ಸಿನಲ್ಲಿ ಸುಮಾರು 15 ಮಂದಿ ಪ್ರಯಾಣಿಕರು ಇದ್ದರು. ಕೆಲವರಿಗೆ ಮಾತ್ರ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಯಾವುದೇ ಗಂಭೀರ ಗಾಯಗಳು ಸಂಭವಿಸಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ” ಎಂದು ಹೇಳಿದರು.

ಇಕ್ಕಟ್ಟಾದ ರಸ್ತೆ ಅಪಘಾತಕ್ಕೆ ಕಾರಣ :

ಅಪಘಾತಕ್ಕೆ ಬಿದನೂರ ಗ್ರಾಮದ ಬಳಿ ಇರುವ ಇಕ್ಕಟ್ಟಾದ ರಸ್ತೆ ಪ್ರಮುಖ ಕಾರಣವಾಗಿದೆ ಎಂದು ಅಫಜಲಪುರ ಸಾರಿಗೆ ಘಟಕ ವ್ಯವಸ್ಥಾಪಕ ಎ.ವಿ. ಭೋವಿ ಮಾಹಿತಿ ನೀಡಿದರು. ಎದುರುಗಡೆಯಿಂದ ಮತ್ತೊಂದು ಬಸ್ ಬರುತ್ತಿದ್ದ ಹಿನ್ನೆಲೆಯಲ್ಲಿ ಚಾಲಕರು ಬಸ್ ಅನ್ನು ರಸ್ತೆ ಬದಿಗೆ ತೆಗೆದುಕೊಳ್ಳಲು ಯತ್ನಿಸಿದಾಗ ನಿಯಂತ್ರಣ ತಪ್ಪಿ ಬಸ್ ಉರುಳಿ ಬಿದ್ದಿದೆ ಎಂದು ಅವರು ವಿವರಿಸಿದರು.

ಈ ಘಟನೆ ಅಫಜಲಪುರ ತಾಲೂಕಿನ ದೇವಲಗಾಣಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News