×
Ad

ಬಡವರನ್ನು ಆರ್ಥಿಕವಾಗಿ ಸಮೃದ್ಧಗೊಳಿಸುವುದೇ ಕಾಂಗ್ರೆಸ್ ಸರಕಾರದ ಗುರಿ: ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್

Update: 2026-01-24 22:53 IST

ಚಿಂಚೋಳಿ : ದೇಶದಲ್ಲಿ ಬಡವರಿಗೆ ನೇರವಾಗಿ 1 ಲಕ್ಷ 20 ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ತಲುಪಿಸುವ ಮೂಲಕ ಸಾಮಾನ್ಯ ಜನರ ಬದುಕನ್ನು ಹಸನು ಮಾಡಿದ ಏಕೈಕ ಸರ್ಕಾರ ಕಾಂಗ್ರೆಸ್ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್ ಅವರು ಹೇಳಿದರು.

ತಾಲ್ಲೂಕಿನ ಭಕ್ತಂಪಳ್ಳಿ ಗ್ರಾಮದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಆಶ್ರಯ ನಿವೇಶನಗಳ ವಿತರಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಅಡಿಗಲ್ಲು ಸಮಾರಂಭವನ್ನು ನೆರವೇರಿಸಿ ಅವರು ಮಾತನಾಡಿದರು.

ಗ್ರಾಮದಲ್ಲಿ 6 ಎಕರೆ ಭೂಮಿಯಲ್ಲಿ ಗುರುತಿಸಲಾದ 120 ನಿವೇಶನಗಳ ಹಕ್ಕು ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. ಉಳಿದ 80 ನಿವೇಶನಗಳನ್ನು ಶೀಘ್ರದಲ್ಲೇ ವಿತರಿಸಲಾಗುವುದು ಎಂದು ತಿಳಿಸಿದರು.

ಗ್ರಾಮದಲ್ಲಿ ಒಟ್ಟು ರೂ.1 ಕೋಟಿ 86 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ತೆಲಂಗಾಣ ಗಡಿಭಾಗದ ರಸ್ತೆ ನಿರ್ಮಾಣ, ಗ್ರಾಮದ ರುದ್ರಭೂಮಿ ಅಭಿವೃದ್ಧಿ ಹಾಗೂ ಮುಸ್ಲಿಂ ಸಮುದಾಯದ ಖಬರಸ್ತಾನ್ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ಯೋಜನೆಯಂತೆ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಪ್ರತಿವರ್ಷ ರೂ.5,000 ಕೋಟಿ ಅನುದಾನ ನೀಡಲಾಗುತ್ತಿದೆ. ಸೇಡಂ ವಿಧಾನಸಭಾ ಕ್ಷೇತ್ರಕ್ಕೆ ಇದುವರೆಗೆ ರೂ.1,000 ಕೋಟಿ ಅನುದಾನ ಒದಗಿಸಲಾಗಿದೆ. ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆಗಳ ಮೂಲಕ ಹೆಣ್ಣುಮಕ್ಕಳಿಗೆ ಆರ್ಥಿಕ ಶಕ್ತಿ ಮತ್ತು ಸಾಮಾಜಿಕ ಗೌರವ ನೀಡಲಾಗಿದೆ ಎಂದು ಸಚಿವರು ಹೇಳಿದರು.

ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯನ್ನು ದುರ್ಬಲಗೊಳಿಸುವ ಮೂಲಕ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ಬಡವರ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿರುವ ಕೇಂದ್ರದ ಧೋರಣೆಯ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದು ಡಾ. ಶರಣಪ್ರಕಾಶ್ ಪಾಟೀಲ್ ಕಿಡಿಕಾರಿದರು.

ಮುಖಂಡರಾದ ಶಿವಶರಣ ರೆಡ್ಡಿ ಮತ್ತು ಲಕ್ಷ್ಮಣ ಅವಂಟಿ ಮಾತನಾಡಿ, ಸತತ ನಾಲ್ಕು ವರ್ಷಗಳ ಹೋರಾಟ ಹಾಗೂ ಶ್ರಮದ ಫಲವಾಗಿ ಗ್ರಾಮದ ನಿವೇಶನಗಳಿಗೆ ಜಾಗ ಮಂಜೂರಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಶೋಕ ರೆಡ್ಡಿ, ಸಂತೋಷ ಗುತ್ತೇದಾರ್, ಸುದರ್ಶನ ರೆಡ್ಡಿ, ಅಕ್ಷಯ ಕೊರವಿ, ಸುರೇಶ ಭಂಟ, ರಾಜು ನಿಷ್ಠಿ, ಶರಣು ಮೋತಕಪಳ್ಳಿ, ನಸೀರ್ ಮದರಗಿ, ಸುರೇಶ, ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ, ಉಪಾಧ್ಯಕ್ಷೆ ಗಂಗಮ್ಮ, ಅನೀಲಕುಮಾರ ಜಮಾದಾರ, ಬಾಬು ಮಿಯ್ಯ, ಶ್ರೀನಿವಾಸ, ಅಜೀತ್ ಪಾಟೀಲ್, ಸಿದ್ದರಾಮ ನಿಷ್ಠಿ, ಅನಂದ ರೆಡ್ಡಿ, ಗೋಪಾಲ ರೆಡ್ಡಿ, ಲಿಂಗಶೆಟ್ಟಿ, ಸಂಗರೆಡ್ಡಿ, ರವಿ ನಾಟಿಕಾರ, ಮಲ್ಲಿಕಾರ್ಜುನ ಭೂಶೇಟ್ಟಿ, ಜಗನ್ನಾಥ ಇದಲಾಯಿ, ನಾಗೇಂದ್ರ, ಸುಭಾನ್ ರೆಡ್ಡಿ, ಜಗದೇವ ಸ್ವಾಮಿ, ಶರಣು ಕುಮಾರ, ಮಲ್ಲಿಕಾರ್ಜುನ ಪಟವಾರಿ, ಶಿವಕುಮಾರ ಸಜ್ಜನ್, ಕೃಷ್ಣರಾಜ, ನಾಗರಾಜ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News