×
Ad

ಕಲಬುರಗಿ | ಪ್ರಯಾಣಿಕರ ಸುರಕ್ಷತೆ ನಮ್ಮ ಮೊದಲ ಆದ್ಯತೆ : ಅರುಣಕುಮಾರ ಪಾಟೀಲ

Update: 2026-01-24 22:49 IST

ಕಲಬುರಗಿ: ಬಸ್ ಚಾಲನೆ ಎನ್ನುವುದು ಕೇವಲ ವಾಹನವನ್ನು ಚಲಾಯಿಸುವುದಲ್ಲ, ಅದು ಜವಾಬ್ದಾರಿ, ಶಿಸ್ತು ಮತ್ತು ಮಾನವೀಯತೆಯ ಸೇವೆಯಾಗಿದೆ. ಪ್ರಯಾಣಿಕರ ಸುರ‍್ಷತೆಯೆ ನಮ್ಮ ಮೊದಲ ಆದ್ಯತೆಯಾಗಿದ್ದು, ಸಂಸ್ಥೆಯ ಪ್ರತಿಯೊಬ್ಬ ಸಿಬ್ಬಂದಿಯ ಧ್ಯೇಯ ಸಹ ಇದೇ ಆಗಿರಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಅರುಣಕುಮಾರ ಪಾಟೀಲ ತಿಳಿಸಿದರು.

ಶನಿವಾರ ನಗರದ ಸೇಡಂ ರಸ್ತೆಯಲ್ಲಿರುವ ನಿಗಮದ ಈಶಾನ್ಯ ಭವನದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಆಯೋಜಿಸಿದ್ದ ಚಾಲಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೆ.ಕೆ.ಆರ್.ಟಿ.ಸಿ. ಎಂಬ ರಥವನ್ನು ಮುನ್ನಡೆಸುತ್ತಿರುವ ಎಲ್ಲಾ ಚಾಲಕರಿಗೆ ಚಾಲಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ ಅವರು, ಪ್ರತಿ ಚಾಲಕರ ಕೈಯಲ್ಲೂ ಅನೇಕ ಕುಟುಂಬಗಳ ಭರವಸೆ ಹಾಗೂ ಭದ್ರತೆ ಅಡಗಿದೆ. ಈ ಅರಿವಿನಿಂದಲೇ ಪ್ರತಿಯೊಬ್ಬರೂ ಹೊಣೆಗಾರಿಕೆಯಿಂದ ಬಸ್ ಚಾಲನೆ ಮಾಡಬೇಕು ಎಂದು ಹೇಳಿದರು.

ಪ್ರತಿಯೊಬ್ಬ ಚಾಲಕರು ನಿಗದಿತ ವೇಗ ಮಿತಿ ಹಾಗೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮದ್ಯಪಾನ ಮತ್ತು ಮಾದಕ ವಸ್ತುಗಳಿಂದ ಸಂಪೂರ್ಣ ದೂರವಿರಬೇಕು. ರಸ್ತೆಗಳಲ್ಲಿ ಪಾದಚಾರಿಗಳು, ಸೈಕಲ್ ಸವಾರರು ಹಾಗೂ ಇತರೆ ರಸ್ತೆ ಬಳಕೆದಾರರ ಬಗ್ಗೆ ಗೌರವ ತೋರಿ, ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವ ಮೂಲಕ ಸುರಕ್ಷಿತ, ಶಿಸ್ತಿನ ಮತ್ತು ನಿಯಮಬದ್ಧ ಚಾಲನೆಗೆ ಮತ್ತೊಮ್ಮೆ ಬದ್ಧರಾಗಬೇಕೆಂದು ಅವರು ಕರೆ ನೀಡಿದರು.

ಸಾಧಕರಿಗೆ ಸನ್ಮಾನ :

ಈ ಸಂದರ್ಭದಲ್ಲಿ ಅಪಘಾತರಹಿತವಾಗಿ ಸೇವೆ ಸಲ್ಲಿಸಿದ, ಅತಿ ಹೆಚ್ಚು ಕೆ.ಎಂ.ಪಿ.ಎಲ್ ಸಾಧನೆ ಮಾಡಿದ ಚಾಲಕರು ಹಾಗೂ ಅತಿ ಹೆಚ್ಚು ಇ.ಪಿ.ಕೆ.ಎಂ (ಆದಾಯ) ಗಳಿಸಿದ ನಿರ್ವಾಹಕರು ಸೇರಿದಂತೆ ಒಟ್ಟು 159 ಜನ ಸಿಬ್ಬಂದಿಗಳನ್ನು ಗಣ್ಯರು ಸನ್ಮಾನಿಸಿ ಪ್ರಶಸ್ತಿ ಪತ್ರ ಹಾಗೂ ಪ್ರೋತ್ಸಾಹ ಧನ ವಿತರಿಸಿದರು.

ಉತ್ತಮ ಚಾಲನಾ ಸೇವೆಗಾಗಿ ನಿಗಮದಿಂದ ನೀಡಲಾಗುವ ಹೆಚ್ಚುವರಿ ಆರ್ಥಿಕ ಸೌಲಭ್ಯಗಳು, ಪುರಸ್ಕಾರಗಳು ಹಾಗೂ ಪ್ರೋತ್ಸಾಹ ಧನಗಳ ಕುರಿತು ಸಹ ವಿವರಿಸಲಾಯಿತು.

ಪ್ರೋತ್ಸಾಹ ಭತ್ಯೆ ಹೆಚ್ಚಳ :

ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಾ. ಬಿ. ಸುಶೀಲಾ ಮಾತನಾಡಿ, ಮುಖ್ಯಮಂತ್ರಿಗಳ ಸ್ವರ್ಣ ಪದಕಕ್ಕೆ ಅರ್ಹರಾಗುವ ಮತ್ತು ಪದಕ ಪಡೆದ ಚಾಲಕರಿಗೆ ನೀಡುವ ಮಾಸಿಕ ಪ್ರೋತ್ಸಾಹ ಭತ್ಯೆಯನ್ನು 500 ರೂ.ರಿಂದ 1,000 ರೂ. ಗೆ ಹಾಗೂ ಬೆಳ್ಳಿ ಪದಕಕ್ಕೆ ಅರ್ಹರಾಗುವ ಚಾಲಕರಿಗೆ ನೀಡುವ ಭತ್ಯೆಯನ್ನು 250 ರೂ.ರಿಂದ 500 ರೂ. ಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿಗಮದ ವಿವಿಧ ವಿಭಾಗಗಳ ಇಲಾಖಾ ಮುಖ್ಯಸ್ಥರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ನಿಗಮದ ಮುಖ್ಯ ಸಂಚಾರ ಅಧಿಕಾರಿ ಸಂತೋಷಕುಮಾರ ಸ್ವಾಗತಿಸಿದರು. ಚಂದ್ರಕಾಂತ ಫುಲೆಕರ್ ವಂದಿಸಿದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News