ಸೆ.6, 7 ರಂದು ಕೃಷಿ ಅಧಿಕಾರಿಗಳ ನೇಮಕಾತಿ ಪರೀಕ್ಷೆ: ಮುಂದೂಡಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ
ಪ್ರಿಯಾಂಕ್ ಖರ್ಗೆ
ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿಗಳ ನೇಮಕಕ್ಕಾಗಿ ಸೆ.6 ಮತ್ತು 7 ರಂದು ಪರೀಕ್ಷೆಯನ್ನು ನಿಗದಿಪಡಿಸಿದ್ದು, ಪರೀಕ್ಷಾ ತಯಾರಿ ಸಮಯವು ತುಂಬಾ ಕಡಿಮೆ ಇರುವುದರಿಂದ ಪರೀಕ್ಷೆಗಳನ್ನು ಮುಂದೂಡಿ ಮರು ನಿಗದಿಪಡಿಸಬೇಕೆಂದು ಕೋರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಕರ್ನಾಟಕ ಲೋಕ ಸೇವಾ ಆಯೋಗದ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಈ ವೃತ್ತಿಪರ ಕೋರ್ಸ್‌ನ ಪಠ್ಯಕ್ರಮವು ವಿಶಾಲ ಮತ್ತು ಸಮಗ್ರವಾಗಿದ್ದು, ಸಂಪೂರ್ಣ ತಯಾರಿಗಾಗಿ ಸಾಕಷ್ಟು ಸಮಯ ಬೇಕಾಗುತ್ತದೆ ಹಾಗೂ ಕೆಲವರು ಆ.30 ರಂದು ನಡೆಯಲಿರುವ ಬ್ಯಾಂಕಿಂಗ್ ಹಾಗೂ ಕೃಷಿ ಅಧಿಕಾರಿಗಳ ಪೂರ್ವಭಾವಿ ಪರೀಕ್ಷೆಗಳ ತಯಾರಿ ನಡೆಸುತ್ತಿದ್ದಾರೆ. ಅಲ್ಲದೇ ಸೆ. 2 ಹಾಗೂ 4 ರಂದು ಕೃಷಿ ಸಂಶೋಧನ ಸೇವೆಗಾಗಿ ಮತ್ತು ಸೆ.2 ಮತ್ತು 3 ರಂದು ಕೈಗಾರಿಕಾ ವಿಸ್ತರಣಾಧಿಕಾರಿ ಪರೀಕ್ಷೆಗಳೂ ನಿಗದಿಗೊಂಡಿವೆ. ಈ ಹಿನ್ನೆಲೆಯಲ್ಲಿ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ (ಕಲ್ಯಾಣ ಕರ್ನಾಟಕ) ಪರೀಕ್ಷೆಗಳ ಆಕಾಂಕ್ಷಿಗಳ ಭವಿಷ್ಯದ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಅಕ್ಟೋಬರ್ ತಿಂಗಳಿನಲ್ಲಿ ಮರು ನಿಗದಿಪಡಿಸಲು ಅಗತ್ಯ ಕ್ಮ ಕೈಗೊಳ್ಳುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.