×
Ad

ಆಳಂದ | ಬೆಳೆ ಪರಿಹಾರ ಬಿಡುಗಡೆಗೊಳಿಸಲು ಆಗ್ರಹ

Update: 2026-01-27 18:38 IST

ಆಳಂದ: ಹೋಬಳಿ ಕೇಂದ್ರವಾಗಿರುವ ನಿಂಬರ್ಗಾ ಗ್ರಾಮದಲ್ಲಿ ಅನೇಕ ರೈತರಿಗೆ ಇದುವರೆಗೆ ಬೆಳೆ ಹಾನಿ ಪರಿಹಾರ ದೊರಕಿಲ್ಲ. ಕೂಡಲೇ ಪರಿಹಾರ ವಿತರಣೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ವಲಯ ಅಧ್ಯಕ್ಷ ಬಸವರಾಜ ಯಳಸಂಗಿ ಅವರು ತಾಲೂಕು ಆಡಳಿತವನ್ನು ಒತ್ತಾಯಿಸಿದರು.

ಈ ಸಂಬಂಧ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ಅವರಿಗೆ ಮನವಿ ಸಲ್ಲಿಸಿದ ಅವರು, ಬೆಳೆ ಹಾನಿ ಪರಿಹಾರ ಪಡೆಯಲು ಅಗತ್ಯವಿರುವ ಡಾಟಾ ಎಂಟ್ರಿ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳದೆ ಇರುವುದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು. ಹಲವು ರೈತರಿಗೆ ಇನ್ನೂ ಪರಿಹಾರ ಮೊತ್ತ ಜಮೆಯಾಗಿಲ್ಲ. ಕೆಲ ರೈತರ ಡಾಟಾ ಎಂಟ್ರಿಯೇ ಆಗಿಲ್ಲ. ಇನ್ನು ಕೆಲವು ಅರ್ಹ ರೈತರ ಡಾಟಾ ಎಂಟ್ರಿ ನಡೆದಿದ್ದರೂ, ಅವರ ಬೆಳೆ ಸಮೀಕ್ಷೆ ಪೂರ್ಣಗೊಳ್ಳದೆ ಉಳಿದಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಕೆಲ ಪ್ರಕರಣಗಳಲ್ಲಿ ಬೆಳೆ ಸಮೀಕ್ಷೆ ವೇಳೆ ತಪ್ಪು ಬೆಳೆ ನಮೂದನೆ ಮಾಡಿರುವುದರಿಂದ ರೈತರಿಗೆ ಪರಿಹಾರ ನಿರಾಕರಣೆಯಾಗುತ್ತಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಈ ಹಿಂದೆ ನವೆಂಬರ್ 26ರಂದು ಪ್ರತಿಭಟನಾ ರೂಪದಲ್ಲಿ ಮನವಿ ಸಲ್ಲಿಸಿದ್ದರೂ ಸಮಸ್ಯೆ ಇನ್ನೂ ಬಗೆಹರಿಯದೆ ಉಳಿದಿದೆ. ಕೂಡಲೇ ಬೆಳೆ ಹಾನಿ ಪರಿಹಾರ ವಿತರಿಸಿದಲ್ಲಿ ಬೆಳೆ ವಿಮೆ ಪರಿಗಣನೆ ಸಾಧ್ಯವಾಗಲಿದ್ದು, ಸಂಕಷ್ಟದಲ್ಲಿರುವ ರೈತರಿಗೆ ದೊಡ್ಡ ನೆರವಾಗಲಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನಿಂಬರ್ಗಾ ಅಧ್ಯಕ್ಷ ಧರ್ಮರಾಯ ಎಸ್. ಕಾಮಣಗೊಳ ಸೇರಿದಂತೆ ಮತ್ತಿತರ ರೈತ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News