ಉದ್ಯೋಗಾವಕಾಶದ ಅಂತರ ಗುರುತಿಸಲು ನಿಪುಣ ಕರ್ನಾಟಕ ಯೋಜನೆಯಡಿ ಆ.9, 10ರಂದು ಮೌಲ್ಯಾಮಾಪನ ಪರೀಕ್ಷೆ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ರಾಜ್ಯದ ಟೈಯರ್ 2 ಮತ್ತು ಟೈಯರ್ 3 ನಗರಗಳಲ್ಲಿ ಪದವೀಧರರಲ್ಲಿ ಹೆಚ್ಚುತ್ತಿರುವ ಉದ್ಯೋಗಾವಕಾಶದ ಅಂತರವನ್ನು ಪರಿಹರಿಸಲು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮೂಲಕ ಪ್ರಮುಖವಾಗಿ ಮರುಕೌಶಲ್ಯ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವಾದ ‘ನಿಪುಣ ಕರ್ನಾಟಕ’ ಅಡಿಯಲ್ಲಿ ಆ.9 ಮತ್ತು 10 ರಂದು ಕಲಬುರಗಿಯಲ್ಲಿ ಆನ್‌ಲೈನ್ ಮೂಲಕ ಸ್ಟೆಮ್ ಅಭ್ಯರ್ಥಿಗಳ ಮೌಲ್ಯಮಾಪನ ಪರೀಕ್ಷೆ ನಡೆಸಲಾಗುತ್ತಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಲಬುರಗಿ-ಶಹಾಬಾದ್ ರಸ್ತೆಯಲ್ಲಿರುವ ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜಿನಲ್ಲಿ ಈ ಮೌಲ್ಯಮಾಪನ ಪರೀಕ್ಷೆ ನಡೆಯಲಿದೆ. ಕಳೆದ ಏಪ್ರಿಲ್ ಮಾಹೆಯಲ್ಲಿ ಕಲಬುರಗಿಯಲ್ಲಿ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಭೌತಿಕವಾಗಿ ಹಾಜರಾದ 10 ಸಾವಿರ ಅಭ್ಯರ್ಥಿಗಳ ಪೈಕಿ ಆಯ್ದ 2,500 ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಪದವೀಧರರನ್ನು ಗುರಿಯಾಗಿಸಿ ಈ ಮೌಲ್ಯಾಮಾಪನ ನಡೆಸಲಾಗುತ್ತಿದೆ ಎಂದರು.
ಇಲ್ಲಿನ ವಿದ್ಯಾರ್ಥಿಗಳು ಅಂಕಗಳಿಕೆಯಲ್ಲಿ ಜಾಣರಿದ್ದಾರೆ, ಆದರೆ ಕೈಗಾರಿಕೆ, ಕಂಪನಿಗಳಿಗೆ ಬೇಡಿಕೆ ಅನುಗುಣವಾಗಿ ಅವರಲ್ಲಿ ಕೌಶಲ್ಯ ಇಲ್ಲ. ಕಲಬುರಗಿ ಉದ್ಯೋಗ ಮೇಳದ ಸಂದರ್ಭದಲ್ಲಿ ಹಾಜರಾದ ಅಭ್ಯರ್ಥಿಗಳ ಅಧ್ಯಯನ ಮಾಡಿದಾಗ ಶೇ.70 ವಿದ್ಯಾರ್ಥಿಗಳು ಅಪ್ಟಿಟ್ಯೂಡ್ ಟೆಸ್ಟ್ ಪಾಸಾಗಲು ಸಮರ್ಥರಿಲ್ಲ ಎಂಬ ಅಂಶ ಕಂಡುಬಂದಿದೆ. ಶೇ.63ಕ್ಕಿಂತ ಹೆಚ್ಚಿನ ಅಭ್ಯರ್ಥಿಗಳಿಗೆ ಸಂವಹನ ಕೌಶಲ್ಯದ ಕೊರತೆ ಇದೆ. ಈ ಕೊರತೆಯನ್ನು ನೀಗಿಸಲೆಂದೇ ಈ ಮೌಲ್ಯಮಾಪನ ಮಾಡಲಾಗುತ್ತಿದೆ. ಮೌಲ್ಯಮಾಪನದ ನಂತರ ಅವರ ಕೌಶಲ್ಯ ಕೊರತೆಯನ್ನು ನೀಗಿಸಲು ಅಗತ್ಯ ಕೌಶಲ್ಯ ನೀಡಿ ಅವರನ್ನು ಉದ್ಯೋಗಕ್ಕೆ ಸಿದ್ಧರನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ಸಾಂಪ್ರದಾಯಿಕ ಕೌಶಲ್ಯ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ ಪ್ರತಿಯೊಬ್ಬ ಅಭ್ಯರ್ಥಿಯ ಅರ್ಹತೆ, ಸಂವಹನ, ಡಿಜಿಟಲ್ ಸಾಕ್ಷರತೆ ಮತ್ತು ನಡವಳಿಕೆಯ ಸಿದ್ಧತೆಯನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ 90 ನಿಮಿಷಗಳ ಕಾಲ ಮೌಲ್ಯಮಾಪನ ಮಾಡಲಾಗುತ್ತದೆ. ಅನ್ಸ್ಟಾಪ್ ಸಂಸ್ಥೆ ಇದರ ಜವಾಬ್ದಾರಿ ಹೊತ್ತಿಕೊಂಡಿದೆ ಎಂದರು.
ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮತ್ತು ಸಂಸದ ರಾಧಾಕೃಷ್ಣ ದೊಡ್ಡಮನಿ ವಿಶೇಷ ಕಾಳಜಿಯಿಂದ ರಾಜ್ಯದಲ್ಲಿಯೇ ಪ್ರಾಯೋಗಿಕವಾಗಿ ಕಲಬುರಗಿ ಜಿಲ್ಲೆಯಲ್ಲಿ ಇದನ್ನು ಮೊದಲು ಅನುಷ್ಠಾನಕ್ಕೆ ತರಲಾಗುತ್ತಿದೆ. ಇಲ್ಲಿನ ಸಾಧಕ-ಭಾಧಕಗಳನ್ನು ನೋಡಿ ರಾಜ್ಯದ ಇತರೆ ಭಾಗದಲ್ಲಿಯೂ ಜಾರಿಗೆ ತರಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಆ.7 ರೊಳಗೆ ಅರ್ಜಿ ಸಲಿಸಲು ಅವಕಾಶ:
ಮೌಲ್ಯಾಮಾಪನ ಪರೀಕ್ಷೆಯಲ್ಲಿ ಭಾಗವಹಿಸಲು ನೋಂದಣಿ ಪ್ರಕ್ರಿಯೇ ಇಂದಿನಿಂದಲೆ ಆರಂಭವಾಗಿದ್ದು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಥವಾ https://unstop.com/o/xvCVUWP/?ref=KalaburgiAssessment. ಅಂತರ್ಜಾಲದ ಮೂಲಕ ಆ.7ರ ರಾತ್ರಿ 11.59 ಗಂಟೆ ವರೆಗೂ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಆ.7 ಮತ್ತು 8 ರಂದು ಪ್ರವೇಶ ಪತ್ರವನ್ನು ಎಸ್.ಎಂ.ಎಸ್. ಅಥವಾ ಇಮೇಲ್ ಮೂಲಕ ಕಳುಹಿಸಲಾಗುತ್ತದೆ. ಆ.9 ಮತ್ತು 10 ರಂದು ಕಲಬುರಗಿಯ ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಬೆಳಿಗ್ಗೆ 10 ರಿಂದ 11.30, ಮಧ್ಯಾಹ್ನ 12 ರಿಂದ 1.30, ಮಧ್ಯಾಹ್ನ 2.30 ರಿಂದ 4 ಹಾಗೂ ಸಂಜೆ 4.30 ರಿಂದ 6 ಗಂಟೆ ವರೆಗೆ ಪ್ರತಿ ಬ್ಯಾಚಿನಲ್ಲಿ 500 ರಂತೆ ತಲಾ 90 ನಿಮಿಷಗಳ ಅವಧಿಯ ಆನ್‌ಲೈನ್ ಟೆಸ್ಟ್ ನಡೆಯಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಸಚಿವರು ಮತ್ತು ಶಾಸಕ ಗಣ್ಯರು ನೋಂದಣಿ ಅಭಿಯಾನದ ಅಂಗವಾಗಿ ಕ್ಯೂರ್ ಕೋಡ್ ಬಿಡುಗಡೆಗೊಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಶಾಸಕರಾದ ಅಲ್ಲಮಪ್ರಭು ಪಾಟೀಲ್ ಮತ್ತು ಎಂ.ವೈ.ಪಾಟೀಲ್, ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ. ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ನಾಗುಬಾಯಿ ಇದ್ದರು.