×
Ad

ಕಲಬುರಗಿ ರೊಟ್ಟಿ ಬ್ರ್ಯಾಂಡಿಗೆ ಪ್ರಧಾನಿ ಮೋದಿ ಶ್ಲಾಘನೆ: ಡಾ.ಉಮೇಶ್ ಜಾಧವ್ ಹರ್ಷ

Update: 2025-06-30 19:51 IST

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿಯವರು 123ನೇ ಮನ್ ಕಿ ಬಾತ್ ನಲ್ಲಿ "ಕಲಬುರಗಿ ರೊಟ್ಟಿ ಸಿರಿಧಾನ್ಯ ಶಕ್ತಿ" ಕುರಿತು ಪ್ರಸ್ತಾಪಿಸಿರುವುದು ಹೆಮ್ಮೆ ತಂದಿದೆ. ಆತ್ಮ ನಿರ್ಭರ ಯೋಜನೆಗೆ ಇದರಿಂದ ಬಲ ತುಂಬಿದಂತಾಗಿದೆ ಮತ್ತು ರೊಟ್ಟಿಗೆ ವಿಶ್ವದಗಲದ ಮಾರುಕಟ್ಟೆ ವಿಸ್ತರಣೆಗೆ ಪ್ರೇರಣೆ ನೀಡಿದೆ ಎಂದು ಮಾಜಿ ಲೋಕಸಭಾ ಸದಸ್ಯ ಡಾ.ಉಮೇಶ್ ಜಾಧವ್ ಸಂತಸ ವ್ಯಕ್ತಪಡಿಸಿದ್ದಾರೆ.

ಉತ್ತರ ಕರ್ನಾಟಕದ ಪ್ರಮುಖ ಆಹಾರ ಜೋಳದ ರೊಟ್ಟಿಯನ್ನು ಜನಪ್ರಿಯಗೊಳಿಸಲು ಮಹಿಳೆಯರು ಒಟ್ಟು ಸೇರಿ ರೊಟ್ಟಿ ಉತ್ಪಾದಕರ ಸಹಕಾರಿ ಸ್ವ ಸಹಾಯ ಸಂಘ ರಚನೆ ಮಾಡಿ 1,000ಕ್ಕೂ ಹೆಚ್ಚು ಮಹಿಳೆಯರು ಕೈಜೋಡಿಸಿ ನೂರಕ್ಕೂ ಹೆಚ್ಚು ಸ್ವ ಸಹಾಯ ಸಹಕಾರಿ ಸಂಘಗಳ ಮೂಲಕ ಮಹತ್ವದ ಸಾಧನೆ ಮಾಡಿರುವುದು ಜಿಲ್ಲೆಗೆ ಹೆಮ್ಮೆ ತಂದಿದೆ. ಮಹಿಳೆಯರು ಆರ್ಥಿಕ ಸಬಲತೆ ಕಡೆಗೆ ಸಾಗುವ ಮಹತ್ವದ ಹೆಜ್ಜೆ ಇದಾಗಿದೆ ಎಂದರು.

ಫೌಝಿಯ ತರನ್ನುಮ್‌ ಅವರಿಗೆ ವಿಶೇಷ ಅಭಿನಂದನೆ ಸಲ್ಲಬೇಕು. ಮಹಿಳೆಯರನ್ನು ಮೋದಿ ಕನಸಿನ ಆತ್ಮ ನಿರ್ಭರತೆಯ ಕಡೆಗೆ ಸಾಗಲು ಅವರಿಗೆ ಜಿಲ್ಲಾಧಿಕಾರಿಯವರು ಉತ್ತೇಜನ ನೀಡಿ ಮತ್ತು ಯೋಜನೆಯನ್ನು ರೂಪಿಸಿರುವುದು ಶ್ಲಾಘನೀಯವಾಗಿದೆ ಎಂದಿದ್ದಾರೆ.

ಕಲಬುರಗಿ ರೊಟ್ಟಿ ಬ್ರ್ಯಾಂಡಿನಿಂದ ರಾಜ್ಯದ ಮಹಿಳಾ ಶಕ್ತಿಗೆ ಹಾಗೂ ಸ್ವ ಸಹಾಯ ಸಂಘಗಳಿಗೆ ಉತ್ತೇಜನ ದೊರೆತಂತಾಗಿದೆ. ಮೋದಿಯವರ ಮಹಿಳಾ ಸಬಲೀಕರಣದ ವಿಶೇಷ ಯೋಜನೆ "ಲಕ್ ಪತಿ ದೀದಿ" ಯೋಜನೆಯನ್ನು ರೊಟ್ಟಿ ತಯಾರಿಸುವ ಮಹಿಳಾ ಸ್ವಸಹಾಯ ಸಂಘಗಳಿಗೆ ವಿಸ್ತರಿಸಿ ಹೆಚ್ಚಿನ ಆರ್ಥಿಕ ನೆರವು ನೀಡುವ ಚಿಂತನೆ ನಡೆಯಲಿ. ತೊಗರಿಯ ಕಣಜ ಎಂದೇ ಖ್ಯಾತಿಯ ಕಲಬುರಗಿ ಜೋಳದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಸ್ತಾಪ ಮಾಡಿರುವುದರಿಂದ ಗರಿ ಮೂಡಿದಂತಾಗಿದೆ. ಮಹಿಳಾ ಸ್ವ ಸಹಾಯ ಸಂಘಗಳ ಎಲ್ಲ ಸದಸ್ಯರಿಗೆ ಡಾ.ಜಾಧವ್ ಅಭಿನಂದನೆ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News