ಸೇಡಂ | ರಾಜ್ಯಪಾಲರಿಗೆ ಕಾಂಗ್ರೆಸ್ ಶಾಸಕರಿಂದ ಅಗೌರವ : ವಿಶೇಶ್ವರ ಹೆಗಡೆ ಕಾಗೇರಿ ಆರೋಪ
ಸೇಡಂ: ವಿಧಾನಸಭೆಯಲ್ಲಿ ರಾಜ್ಯಪಾಲರು ಭಾಷಣಕ್ಕೆ ವಿರಾಮ ನೀಡಿ ಹೊರ ಹೋಗುವ ವೇಳೆ ಕಾಂಗ್ರೆಸ್ ಸರ್ಕಾರದ ಶಾಸಕರು ಅಗೌರವ ತೋರಿರುವುದು ಅತ್ಯಂತ ಖಂಡನೀಯವಾಗಿದ್ದು, ಇದು ಕರ್ನಾಟಕ ರಾಜ್ಯಕ್ಕೆ ಕಳಂಕ ತರುವಂತಹ ಘಟನೆಯಾಗಿದೆ ಎಂದು ಸಂಸದ ವಿಶೇಶ್ವರ ಹೆಗಡೆ ಕಾಗೇರಿ ತೀವ್ರ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಸದನದಿಂದ ಹೊರ ಹೋಗುವಾಗ ಕೆಲ ಕಾಂಗ್ರೆಸ್ ಶಾಸಕರು ಅವರ ಎದುರುಗಡೆ ತೆರಳಿ ಘೋಷಣೆಗಳನ್ನು ಕೂಗುತ್ತಾ ಹೊರ ಹೋಗಲು ಅಡ್ಡಿಪಡಿಸಿದ್ದು, ಕೆಲವರು ಗೂಂಡಾಗಳಂತೆ ವರ್ತಿಸಿರುವುದು ನಾಚಿಕೆಗೇಡಿತನದ ವಿಷಯವಾಗಿದೆ ಎಂದರು.
ನಾನು ಕಳೆದ 30 ವರ್ಷಗಳಿಂದ ಸದನದ ಭಾಗವಾಗಿದ್ದೇನೆ. ಈ ರೀತಿಯ ಅಸಭ್ಯ ಹಾಗೂ ಅನಾಗರಿಕ ವರ್ತನೆ ಇದುವರೆಗೂ ಕಂಡಿಲ್ಲ. ಇದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವ ಘಟನೆ ಎಂದು ಕಾಗೇರಿ ಹೇಳಿದರು.
ಈ ಘಟನೆಯ ಕುರಿತು ಕಾಂಗ್ರೆಸ್ ಶಾಸಕರು ಕೂಡಲೇ ರಾಜ್ಯಪಾಲರಿಗೆ ಕ್ಷಮೆಯಾಚನೆ ಮಾಡಬೇಕು. ಗೂಂಡಾಗಳಂತೆ ವರ್ತಿಸಿದ ಶಾಸಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಇನ್ನು ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವಿಬಿ ಜಿ ರಾಮ್ ಜೀ ಬಿಲ್ ಯೋಜನೆ ಬಡವರ ಹಿತಕ್ಕಾಗಿ ರೂಪಿಸಲಾಗಿದೆ. ಈ ಯೋಜನೆ ಜಾರಿಯಾದರೆ ಹಣ ನೇರವಾಗಿ ಗ್ರಾಮ ಪಂಚಾಯಿತಿಗಳಿಗೆ ತಲುಪುತ್ತದೆ. ಇದರಿಂದ ಮಧ್ಯವರ್ತಿಗಳಿಗೆ ಅವಕಾಶ ಇರುವುದಿಲ್ಲ. ಈ ಕಾರಣದಿಂದಲೇ ಕಾಂಗ್ರೆಸ್ ಪಕ್ಷ ರಾಜಕೀಯ ಪ್ರೇರಿತವಾಗಿ ಮಹಾತ್ಮ ಗಾಂಧೀಜಿಯವರಿಗೆ ಅವಮಾನವಾಗಿದೆ ಎಂದು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕಾಗೇರಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ರಾಜಕುಮಾರ ಪಾಟೀಲ್, ಬಿಜೆಪಿ ಮಂಡಲ ಅಧ್ಯಕ್ಷ ಶರಣು ಮೆಡಿಕಲ್, ನಗರಾಧ್ಯಕ್ಷ ಸತೀಶ ಪಾಟೀಲ್, ಓಂಪ್ರಕಾಶ್ ಪಾಟೀಲ್, ದೇವೇಂದ್ರಪ್ಪ ಎಸ್. ಕೋಟಿರ್ಕಿ, ವೇಂಕಟೇಶ ಬೇಕರಿ, ಶ್ರೀಮಂತ ಅವಂಟಿ, ಶಿವಕುಮಾರ್ ಆರ್. ಪಾಗಾ, ರಾಘವೇಂದ್ರ ಮೆಕಾನಿಕ್, ಮಲ್ಲಿಕಾರ್ಜುನ ಭೂತಪೂರ, ಸಿದ್ದು ಸೌಕರ ತೂನುರ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.