×
Ad

ಕಲಬುರಗಿ | ವಿಜ್ಞಾನ ಸಂವಹನ ಶಿಬಿರ : ಶಿಕ್ಷಕ ರವೀಂದ್ರ ರುದ್ರವಾಡಿಗೆ ಪ್ರಥಮ ಸ್ಥಾನ

Update: 2026-01-24 22:36 IST

ಕಲಬುರಗಿ: ಕರ್ನಾಟಕ ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡೆಮಿಯು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಎರಡು ದಿನಗಳ ವಿಜ್ಞಾನ ಸಂವಹನ ಶಿಬಿರದ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಂದಗೂರಿನ ಪ್ರಾಥಮಿಕ ಶಾಲಾ ಶಿಕ್ಷಕ ರವೀಂದ್ರ ರುದ್ರವಾಡಿ ಅವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ರವೀಂದ್ರ ರುದ್ರವಾಡಿಯವರು ವಿಜ್ಞಾನ ಲೇಖನ, ವಿಜ್ಞಾನ ಸಂವಹನ, ಶಿಕ್ಷಣ ಮತ್ತು ವೈಚಾರಿಕ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ನ್ಯಾಷನಲ್ ಬುಕ್ ಟ್ರಸ್ಟ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವಾರು ಪ್ರತಿಷ್ಠಿತ ಸಂಸ್ಥೆಗಳ ಪ್ರಕಟಣೆಗಳಲ್ಲಿ ಲೇಖಕರಾಗಿ ತಮ್ಮ ಕೊಡುಗೆ ನೀಡಿದ್ದಾರೆ.

ಜಾಗತಿಕ ತಾಪಮಾನ ಹೆಚ್ಚಳ ವಿಷಯದ ಕುರಿತು ಆಯೋಜಿಸಿದ್ದ ಈ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 28 ವಿಜ್ಞಾನ ಲೇಖಕರು ಹಾಗೂ ಸಂವಹನಕಾರರು ಭಾಗವಹಿಸಿದ್ದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷ ಪ್ರೊ. ರಾಜಾಸಾಬ್ ಎ.ಎಸ್, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಶಿಬಿರದ ನಿರ್ದೇಶಕರಾದ ಡಾ. ವಸುಂದರಾ ಭೂಪತಿ, ಖ್ಯಾತ ವಿಜ್ಞಾನ ಲೇಖಕರಾದ ಟಿ.ಆರ್. ಅನಂತರಾಮು, ಚಳ್ಳಕೇರಿ ಯರ್ರಿಸ್ವಾಮಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಆರ್. ಸುನಂದಮ್ಮ, ದೂರದರ್ಶನ ಖ್ಯಾತಿಯ ಡಾ. ನಾ. ಸೋಮೇಶ್ವರ ಅವರು ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಿದರು.

ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪದ್ಮಭೂಷಣ ಪುರಸ್ಕೃತ ಖ್ಯಾತ ಮನೋವಿಜ್ಞಾನಿ ಡಾ. ಸಿ.ಆರ್. ಚಂದ್ರಶೇಖರ, ವಿಜ್ಞಾನಿ ನೇಮಿಚಂದ್ರ, ಹಿರಿಯ ವಿಜ್ಞಾನಿಗಳಾದ ಡಾ. ಕೆ.ಎನ್. ಗಣೇಶಯ್ಯ, ಡಾ. ನೂರ್ ಸಮದ್ ಅಬ್ಬಲಗೆರೆ, ಕೊಳ್ಳೆಗಾಲ ಶರ್ಮಾ, ಡಾ. ಎಚ್.ಆರ್. ಸ್ವಾಮಿ, ಖ್ಯಾತ ಲೇಖಕಿ ಎಂ.ಎಸ್. ಆಶಾದೇವಿ, ಗುರುರಾಜ ಎಸ್. ದಾವಣಗೆರೆ ಸೇರಿದಂತೆ ಹಲವಾರು ಹಿರಿಯ ವಿಜ್ಞಾನಿಗಳು ಮತ್ತು ವಿಜ್ಞಾನ ಲೇಖಕರು ಭಾಗವಹಿಸಿದ್ದರು.

ಎರಡು ದಿನಗಳ ಕಾಲ ವಿಜ್ಞಾನ ಸಾಹಿತ್ಯ ರಚನೆ, ಸಂವಹನದ ಅಗತ್ಯತೆ, ಸಾಧ್ಯತೆಗಳು ಮತ್ತು ಅವಕಾಶಗಳ ಕುರಿತು ವ್ಯಾಪಕ ಚರ್ಚೆ ನಡೆಸಲಾಯಿತು ಎಂದು ಶಿಬಿರದ ನಿರ್ದೇಶಕರಾದ ಡಾ. ವಸುಂದರಾ ಭೂಪತಿ ತಿಳಿಸಿದರು.

ಈ ಸ್ಪರ್ಧೆಯಲ್ಲಿ ಹೊಸಪೇಟೆಯ ವಿಜ್ಞಾನ ಲೇಖಕ ಡಾ. ರಾಜಾಭಕ್ಷಿ ದ್ವಿತೀಯ ಸ್ಥಾನ ಹಾಗೂ ಬೆಂಗಳೂರು ಮೂಲದ ವೈದ್ಯ ಲೇಖಕಿ ಡಾ. ಜ್ಯೋತಿ ಸಿದ್ದಮಲ್ಲಯ್ಯ ತೃತೀಯ ಸ್ಥಾನ ಪಡೆದರು. ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗಾಗಿ ಕಿರು ಪ್ರಬಂಧ ರಚನಾ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News