×
Ad

ಸೇಡಂ | ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು: ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್

ಅಂಬಿಗರ ಚೌಡಯ್ಯನವರ 906ನೇ ಜಯಂತ್ಯೋತ್ಸವ

Update: 2026-01-24 22:21 IST

ಸೇಡಂ: ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡ (ಎಸ್ಟಿ) ಪಟ್ಟಿಗೆ ಸೇರಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಶೀಘ್ರದಲ್ಲೇ ಶಿಫಾರಸು ಸಲ್ಲಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್ ತಿಳಿಸಿದ್ದಾರೆ.

ತಾಲೂಕಿನ ಮುನಕನಪಲ್ಲಿ ಗ್ರಾಮಸ್ಥರ ವತಿಯಿಂದ ಆಯೋಜಿಸಲಾದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತ್ಯೋತ್ಸವ ಹಾಗೂ ಕೋಲಿ ಸಮಾಜದ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸುವ ವಿಷಯವನ್ನು ಈಗಾಗಲೇ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗಿದೆ. ಈ ಕುರಿತು ಕೇಂದ್ರ ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹೇರಲಾಗುವುದು ಎಂದು ಹೇಳಿದರು.

ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳನ್ನು ನಾವೆಲ್ಲರೂ ಚಾಚು ತಪ್ಪದೇ ಪಾಲಿಸಬೇಕು. ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಸಮಾಜಕ್ಕೆ ಒಳಿತಲ್ಲ. ಪಾಶ್ಚಾತ್ಯ ಸಂಸ್ಕೃತಿಗೆ ದಾಸರಾಗದೇ ನಮ್ಮ ಹೆಮ್ಮೆಯ ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಂಡು ಸಾಗಬೇಕು ಎಂದು ಕರೆ ನೀಡಿದರು.

ಮಾಜಿ ಶಾಸಕ ರಾಜಕುಮಾರ ಪಾಟೀಲ್ ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯನವರು ಶ್ರೇಷ್ಠ ಜ್ಞಾನಿಯಾಗಿದ್ದು, ಅವರ ವಚನಗಳು ಸಮಾಜಕ್ಕೆ ದಾರಿ ದೀಪವಾಗಿವೆ. ಯುವಕರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಯುವಕರು ದುಶ್ಚಟಗಳಿಂದ ದೂರವಿದ್ದು, ಗುಣಮಟ್ಟದ ಶಿಕ್ಷಣದ ಕಡೆ ಗಮನ ಹರಿಸಬೇಕು. ಕೋಲಿ ಸಮಾಜದ ಅಭಿವೃದ್ಧಿಗೆ ಯಾವುದೇ ಪಕ್ಷಭೇದ ಮರೆತು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರೊಂದಿಗೆ ಸಹಕಾರ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷ್ಣಗಿರಿಯ ಶ್ರೀ ಕೃಷ್ಣಾನಂದ ಮಹಾಸ್ವಾಮಿಗಳು, ಗುಂಡೆಪಲ್ಲಿಯ ಶ್ರೀ ಷ.ಬ್ರ. ಶಿವಸಿದ್ದ ಸೋಮೇಶ್ವರ ಶಿವಾಚಾರ್ಯರು, ಜಾಕನಪಲ್ಲಿಯ ಅಭಿನವ ಗವಿಸಿದ್ದಲಿಂಗೇಶ್ವರ ಶಿವಾಚಾರ್ಯರು, ಅಲ್ಲಮಪ್ರಭು ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯಾಧ್ಯಕ್ಷ ದತ್ತಾತ್ರೇಯರೆಡ್ಡಿ ಮುದಿರಾಜ್ ಉಪಸ್ಥಿತರಿದ್ದರು.

ಮುಖಂಡರಾದ ಶರಣಪ್ಪ ತಳವಾರ್, ರವಿರಾಜ್ ಕೊರವಿ, ಡಾ. ಇಂದ್ರಾಶಕ್ತಿ, ಕಾಂಗ್ರೆಸ್ ಮುಖಂಡರು, ವರ್ಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಸತೀಶರೆಡ್ಡಿ ಪಾಟೀಲ್ ರಂಜೊಳ್, ರವೀಂದ್ರ ನಂದಿಗಾಮ್, ಸುನೀತಾ ತಳವಾರ್, ಶಿವಶರಣ ಕೋಬಾಳ, ಭೀಮರೆಡ್ಡಿ ಪಾಟೀಲ್ ಜಿಲ್ಲೆಡಪಲ್ಲಿ, ಡಾ. ವೆಂಕಟೇಶ ಮಿಸ್ಕಿನ್, ನಾಗೇಶ ಕಾಳಾ, ಭೀಮರಾಯ ಹಣಮನಳ್ಳಿ, ಅಶೋಕ ಕುಂಬಾರ್, ಪ್ರಕಾಶ ಮುನಕನಪಲ್ಲಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News