ಕಲಬುರಗಿ | ವಿಬಿ ಜಿ ರಾಮ್ ಜಿ ಕಾಯ್ದೆ ರದ್ದುಪಡಿಸಿ, ಮನರೇಗಾ ಪುನರ್ ಸ್ಥಾಪನೆಗೆ ಆಗ್ರಹ
ಉದ್ಯೋಗ ಖಾತ್ರಿ ಕಾಯಕ ಜೀವಿಗಳ ಸಂಘಟನೆಯಿಂದ ಒತ್ತಾಯ
ಕಲಬುರಗಿ: ಕಳೆದ ಇಪ್ಪತ್ತು ವರ್ಷಗಳಿಂದ ಜಾರಿಯಲ್ಲಿರುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ಮನರೇಗಾ) ಗ್ರಾಮೀಣ ಜನರ ಜೀವನಾಧಾರವಾಗಿದ್ದು, ಇದನ್ನು ದುರ್ಬಲಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸದಾಗಿ ತಂದಿರುವ ವಿಬಿ ಜಿ ರಾಮ್ ಜಿ ಯೋಜನೆಯನ್ನು ಕೂಡಲೇ ರದ್ದುಪಡಿಸಬೇಕೆಂದು ಉದ್ಯೋಗ ಖಾತ್ರಿ ಕಾಯಕ ಜೀವಿಗಳ ಸಂಘಟನೆ ಆಗ್ರಹಿಸಿದೆ.
ಈ ಸಂಬಂಧ ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಂಘಟನೆ, ಗ್ರಾಮಗಳ ಅಭಿವೃದ್ಧಿಯ ಮೂಲಕವೇ ದೇಶದ ನೈಜ ಅಭಿವೃದ್ಧಿಯ ಕನಸನ್ನು ಮಹಾತ್ಮಾ ಗಾಂಧೀಜಿ ಕಂಡಿದ್ದರು. ಆದರೆ ಹೊಸ ಯೋಜನೆಯಲ್ಲಿ ಅವರ ಹೆಸರನ್ನೇ ಕೈಬಿಟ್ಟಿರುವುದು ಖಂಡನೀಯ ಎಂದು ಆರೋಪಿಸಿದೆ.
ಮೇಲ್ನೋಟಕ್ಕೆ 125 ದಿನಗಳ ಕೆಲಸ ನೀಡುವ ಭರವಸೆ ನೀಡಲಾಗುತ್ತಿದ್ದರೂ, ಕೃಷಿ ಋತುವಿನಲ್ಲಿ 60 ದಿನಗಳ ಕೆಲಸದ ನಿಷೇಧ, ಅನುದಾನ ಕೊರತೆ ಹಾಗೂ ಕೂಲಿ ಪಾವತಿಯಲ್ಲಿ ಅನಿಶ್ಚಿತತೆ ಇರುವುದರಿಂದ ಕಾರ್ಮಿಕರ ಬದುಕಿಗೆ ಭದ್ರತೆ ಇಲ್ಲದಂತಾಗಿದೆ ಎಂದು ಸಂಘಟನೆ ತಿಳಿಸಿದೆ.
60:40 ವೆಚ್ಚದ ಅನುಪಾತದ ಮೂಲಕ ರಾಜ್ಯ ಸರ್ಕಾರಗಳ ಮೇಲೆ ಹಣಕಾಸಿನ ಹೊರೆ ಹಾಕಲಾಗಿದ್ದು, ಇದರಿಂದ ಉದ್ಯೋಗ ಒದಗಿಸುವ ಜವಾಬ್ದಾರಿಯಿಂದ ರಾಜ್ಯಗಳು ನುಣುಚಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಬಿ ಗ್ರಾಮಜೀ ಯೋಜನೆಯ ನಿಬಂಧನೆಗಳನ್ನು ಪರಿಶೀಲಿಸಿದರೆ, ಉದ್ಯೋಗ ಖಾತ್ರಿಯನ್ನೇ ಸಂಪೂರ್ಣವಾಗಿ ದುರ್ಬಲಗೊಳಿಸುವ ಅಂಶಗಳೇ ಹೆಚ್ಚಿವೆ ಎಂದು ಸಂಘಟನೆಯ ಪದಾಧಿಕಾರಿಗಳು ಹೇಳಿದರು.
ಗ್ರಾಮ ಪಂಚಾಯತಿಗಳ ಅಧಿಕಾರವನ್ನು ಕಿತ್ತುಕೊಂಡು, ಜನರ ಕೆಲಸದ ಹಕ್ಕಿಗೆ ಧಕ್ಕೆ ಉಂಟುಮಾಡಲಾಗುತ್ತಿದೆ. ಗುತ್ತೆದಾರರು ಹಾಗೂ ಕಾರ್ಪೊರೇಟ್ ಸಂಸ್ಥೆಗಳಿಗೆ ಅನುಕೂಲವಾಗುವಂತೆ 2047ರವರೆಗಿನ ಅಭಿವೃದ್ಧಿಯ ಭ್ರಮೆ ಸೃಷ್ಟಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಆದ್ದರಿಂದ ಮನರೇಗಾ ಯೋಜನೆಯನ್ನು ಮುಂದುವರೆಸಿ ಕೆಲಸದ ಅವಧಿಯನ್ನು 200 ದಿನಗಳಿಗೆ ಹೆಚ್ಚಿಸಬೇಕು, ದಿನಗೂಲಿಯನ್ನು 700 ರೂ. ಗೆ ಹೆಚ್ಚಿಸಬೇಕು, ಯೋಜನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಿ ಪುನರ್ ಸ್ಥಾಪಿಸಬೇಕು ಜೊತೆಗೆ ನಗರ ಪ್ರದೇಶಗಳಿಗೂ ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೊಳಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಹೋರಾಟಗಾರರಾದ ಕೆ. ನೀಲಾ, ಮೀನಾಕ್ಷಿ ಬಾಳಿ, ಡಾ. ಪ್ರಭು ಖಾನಾಪುರೆ, ರೂಪಾ ಇಕ್ಕಳಕಿ, ಸುಜಾತಾ ಶಹಾಬಾದ, ಪಾಂಡುರಂಗ ಮಾವಿನಕರ, ಲವಿತ್ರ ವಸ್ತ್ರದ, ಶೋಭಾ ಭೂ. ತೆಗನೂರ, ಲವಕುಶ ಪಾಳಾ, ಸ್ವರಾಜ ಶಿವಲಿಂಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.