ಕಲಬುರಗಿ | ಹಾಡಹಗಲೇ ಜ್ಯುವೆಲ್ಲರಿಯಿಂದ 3 ಕೆಜಿ ಚಿನ್ನಾಭರಣ ದರೋಡೆ
ಕಲಬುರಗಿ: ನಗರದ ಸರಾಫ್ ಬಜಾರ್ ನಲ್ಲಿನ ಚಿನ್ನಾಭರಣ ಮಳಿಗೆಯೊಂದಕ್ಕೆ ನುಗ್ಗಿದ ನಾಲ್ವರು ಮುಸುಕುಧಾರಿಗಳು ಮಳಿಗೆಯ ಮಾಲಕನಿಗೆ ಗನ್ ತೋರಿಸಿ, ಕೈ ಕಾಲು ಕಟ್ಟಿ ಹಾಕಿ ಸುಮಾರು 3 ಕೆ.ಜಿ ಚಿನ್ನಾಭರಣವನ್ನು ದರೋಡೆ ಮಾಡಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ನಗರದ ಸರಾಫ್ ಬಜಾರ್ನಲ್ಲಿನ ಮಾಲಿಕ್ ಜ್ಯುವೆಲ್ಲರ್ಸ್ ಎಂಬ ಚಿನ್ನದ ಮಳಿಗೆಯಲ್ಲಿ ಈ ದರೋಡೆ ನಡೆದಿದೆ.
ಶುಕ್ರವಾರ ಮಧ್ಯಾಹ್ನ 11:50ರ ವೇಳೆ ಜ್ಯುವೆಲ್ಲರಿ ಮಾಲಕ ಅಂಗಡಿಯಲ್ಲಿ ಕುಳಿತುಕೊಂಡಿದ್ದ ವೇಳೆ ನುಗ್ಗಿದ ನಾಲ್ವರು ಮುಸುಕುಧಾರಿಗಳು ಮಾಲಕನಿಗೆ ಗನ್ ತೋರಿಸಿ ಹೆದರಿಸಿ, ಕೈ ಕಾಲು ಕಟ್ಟಿ ಹಾಕಿದ್ದಾರೆ. ಬಳಿಕ ಅಂಗಡಿಯಲ್ಲಿದ್ದ ಸುಮಾರು 3 ಕೆಜಿ ಚಿನ್ನಾಭರಣವನ್ನು ದೋಚಿ ಸಿನಿಮೀಯ ಶೈಲಿಯಲ್ಲಿ ಪರಾರಿಯಾಗಿರುವ ಘಟನೆ ನಡೆದಿದೆ.
ಜನನಿಬಿಡ ಪ್ರದೇಶವಾಗಿರುವ ಸೂಪರ್ ಮಾರ್ಕೆಟ್ ನಲ್ಲಿ ಈ ರೀತಿ ಹಾಡಹಗಲೇ ದರೋಡೆ ನಡೆದಿರುವುದು ಜನತೆಯನ್ನು ಬೆಚ್ಚಿ ಬೀಳಿಸಿದೆ.
ದರೋಡೆಕೋರರ ಕೃತ್ಯ ಅಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಇದನ್ನು ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಡಿಸಿಪಿ ಕನಿಕಾ ಸಿಕ್ರಿವಾಲ್, ಎಸಿಪಿ, ಪಿಐ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆಂದು ತಿಳಿದು ಬಂದಿದೆ.
ಇತ್ತೀಚೆಗೆ ನಗರದ ಪೂಜಾರಿ ಚೌಕ್ ಸಮೀಪದಲ್ಲಿ ಎಟಿಎಂ ನಲ್ಲಿದ್ದ ಕೋಟ್ಯಂತರ ಹಣವನ್ನು ದರೋಡೆ ಮಾಡಿದ್ದ ಪ್ರಕರಣ ಮಾಸುವ ಮುನ್ನವೇ ಇದೀಗ ನಗರದಲ್ಲಿ ಮತ್ತೊಂದು ದರೋಡೆ ನಡೆದಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಚಿನ್ನಾಭರಣ ಮಳಿಗೆಯಿಂದ ಲೂಟಿ ನಡೆದಿರುವ ವಿಷಯ ಬಹಿರಂಗವಾಗುತ್ತಲೇ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.