ಕಲಬುರಗಿ | ಪ್ರತಿ ಟನ್ ಕಬ್ಬಿಗೆ 3,500 ದರಕ್ಕೆ ಆಗ್ರಹಿಸಿ ಅಫಜಲಪುರ ಬಂದ್
ಕಲಬುರಗಿ : ಪ್ರತಿ ಟನ್ ಕಬ್ಬಿಗೆ 3,500 ರೂ. ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತಪರ ಸಂಘಟನೆಗಳು ಘೋಷಿಸಿರುವ ʼಅಫಜಲಪುರ ಬಂದ್ʼ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಗುರುವಾರ ಬೆಳಗ್ಗೆ ಅಫಜಲಪುರ ಪಟ್ಟಣದ ಬಸವೇಶ್ವರ ಸರ್ಕಲ್ ನಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ವಿವಿಧ ಕಡೆಗಳಲ್ಲಿ ಹಲವಾರು ಅಂಗಡಿಗಳು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚುವ ಮೂಲಕ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ.
ಕಬ್ಬು ಬೆಳೆಗಾರರಿಗೆ ತೂಕ ಮತ್ತು ಅಳತೆಯಲ್ಲಿ ಆಗುತ್ತಿರುವ ಮೋಸವನ್ನು ತಡೆಗಟ್ಟಬೇಕು, ಕಬ್ಬು ಸಾಗಾಟ ಮಾಡುವ ಟ್ರ್ಯಾಕ್ಟರ್ ಮಾಲಕರಿಂದ ಕಿರುಕುಳವಾಗುತ್ತಿದೆ, ಅದನ್ನ ತಡೆಗಟ್ಟಲು ಕ್ರಮ ವಹಿಸಬೇಕು. ಟ್ರಾಕ್ಟರ್ ಮಾಲಕರು ಪ್ರತಿ ಟ್ರಿಪ್ಪಿಗೆ ಹಣ ಕೇಳುತ್ತಾರೆ ಮತ್ತು ಕಬ್ಬು ಕಟಾವ್ ಮಾಡುವ ಟೋಳಿಗಳಿಂದ ಕಬ್ಬು ಬೆಳೆಗಾರರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಇವುಗಳನ್ನು ನಿಯತ್ರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರತಿಭಟನಾನಿರತ ರೈತರಿಗೆ ವಿವಿಧ ರಂಗದ ವ್ಯಕ್ತಿಗಳು ಬೆಂಬಲಿಸಿ, ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಭಟನೆಯಲ್ಲಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ್ ಹೂಗಾರ, ತಾಲೂಕ ಅಧ್ಯಕ್ಷ ಭಾಗಣ್ಣ ಕುಂಬಾರ, ಶರಣಬಸಪ್ಪ ಮಮಶೆಟ್ಟಿ, ಸಿದ್ದು ದನ್ನೂರ, ಲಕ್ಷ್ಮಿಪುತ್ರ ಮನಮಿ, ಶರಣಗೌಡ ಮಾಲಿ ಪಾಟೀಲ, ಧಾನು ಪತಾಟೆ, ರಾಜು ಬಡದಾಳ, ಸಿದ್ದರಾಮ ಸುಲ್ತಾನ್ ಪುರ, ಬಸವರಾಜ ವಾಳಿ, ರೇವಣಸಿದ್ದಯ್ಯ ಮಠ, ಧರಪ್ಪ ಗೌಡ ಬಿರಾದಾರ್, ಶರಣಪ್ಪ ಮೇಳಕುಂದಿ ಸೇರಿದಂತೆ ಮತ್ತಿತರರು ಇದ್ದರು.