ಕಲಬುರಗಿ | ಕಮಲಾಪುರದಲ್ಲಿ ಬೆಳೆ ಹಾನಿ ವೀಕ್ಷಿಸಿದ ಕೇಂದ್ರ ನೆರೆ ಹಾನಿ ತಂಡ
ಕಲಬುರಗಿ : ಕಳೆದ ವರ್ಷದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭೀಕರ ಮಳೆಯಿಂದ ಜಿಲ್ಲೆಯಲ್ಲಿ ಉಂಟಾದ ಬೆಳೆ ಹಾನಿ ಹಾಗೂ ಮೂಲಸೌಕರ್ಯ ನಷ್ಟದ ಅಧ್ಯಯನಕ್ಕೆ ಕೇಂದ್ರ ತಂಡ ಮಂಗಳವಾರ ಭೇಟಿ ನೀಡಿತು. ಕಮಲಾಪುರ ತಾಲೂಕಿನ ಕಿಣ್ಣಿ ಸಡಕ್, ಡೊಂಗರಗಾಂವ, ಭೀಮನಾಳ ಹಾಗೂ ಕಮಲಾಪುರ ಗ್ರಾಮಗಳಲ್ಲಿ ತಂಡವು ಹಾನಿಗೊಳಗಾದ ಬೆಳೆಗಳು, ರಸ್ತೆ ಮತ್ತು ಸೇತುವೆಗಳನ್ನು ವೀಕ್ಷಿಸಿತು.
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ನಿರ್ದೇಶಕ ಡಾ. ಪೊನ್ನುಸ್ವಾಮಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ಜಯಶ್ರೀ ಕಕ್ಕರ್ ಅವರನ್ನೊಳಗೊಂಡ ತಂಡವು ರೈತರ ಅಳಲನ್ನು ಆಲಿಸಿತು.
ಡೊಂಗರಗಾಂವ ಗ್ರಾಮದ ರೈತ ಅಭಿಷೇಕ್ ಅವರ ಹೊಲಕ್ಕೆ ಭೇಟಿ ನೀಡಿದಾಗ, ಅವರು ತಮ್ಮ 4.32 ಎಕರೆ ಪ್ರದೇಶದ ತೊಗರಿ ಬೆಳೆ ಹಾನಿಯಾಗಿರುವುದನ್ನು ವಿವರಿಸಿದರು.
ಪ್ರತಿ ಎಕರೆಗೆ 30 ಸಾವಿರ ರೂ. ಖರ್ಚು ಮಾಡಿದ್ದೆವು, ಆದರೆ ಮಳೆಯಿಂದಾಗಿ ಬಿತ್ತಿದ ಬೀಜದಷ್ಟು ಫಸಲು ಬರುವ ಸ್ಥಿತಿಯಲ್ಲಿಲ್ಲ ಎಂದು ರೈತ ತನ್ನ ನೋವನ್ನು ತೋಡಿಕೊಂಡರು. ಕಮಲಾಪುರದ ರೈತ ಪ್ರಶಾಂತ್ ಸಹ ಮಳೆಯಿಂದಾಗಿ ಬೆಳೆ ಕೊಚ್ಚಿ ಹೋಗಿರುವುದು ಮತ್ತು ಮರು ಬಿತ್ತನೆ ಮಾಡಿದ ಕುಸುಬೆ ಬೆಳೆಯ ಇಳುವರಿ ಬಗ್ಗೆಯೂ ಆತಂಕ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದ ಕಾರಣ ಬೆಳೆಗಳಲ್ಲದೆ ಶಾಲೆಗಳು, ಅಂಗನವಾಡಿಗಳು, ರಸ್ತೆ ಮತ್ತು ಸೇತುವೆಗಳಿಗೂ ಹಾನಿಯಾಗಿದೆ. ಈಗಾಗಲೇ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಹಾಗೂ ರಾಜ್ಯ ಸರ್ಕಾರದಿಂದಲೂ ಪರಿಹಾರ ವಿತರಿಸಲಾಗಿದೆ ಎಂದು ತಂಡಕ್ಕೆ ಮಾಹಿತಿ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ಕಮಲಾಪುರ ತಾಲೂಕಿನಲ್ಲಿ ಬಿತ್ತನೆಯಾದ 7,892 ಹೆಕ್ಟೇರ್ ತೊಗರಿ ಪೈಕಿ ಶೇ. 80ರಷ್ಟು ಹಾನಿಯಾಗಿದೆ. ಮಣ್ಣಿನಲ್ಲಿ ಅತಿಯಾದ ತೇವಾಂಶ ಇರುವುದರಿಂದ ಎರಡನೇ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದರು.
ಬೆಳೆ ಹಾನಿಯ ಜೊತೆಗೆ ತಂಡವು ಕಿಣ್ಣಿಸಡಕ್-ಡೋರ ಜಂಬಗಾ ನಡುವಿನ ಸೇತುವೆ ಹಾಗೂ ಭೀಮನಾಳ ಗ್ರಾಮದ ರಸ್ತೆಗಳ ಹಾನಿಯನ್ನು ವೀಕ್ಷಿಸಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಭಂವರ್ ಸಿಂಗ್ ಮೀನಾ, ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂದಾರ್, ತಹಶೀಲ್ದಾರ್ ಮೊಹಮ್ಮದ್ ಮೋಹಸೀನ್, ಕೃಷಿ ಉಪನಿರ್ದೇಶಕಿ ಅನುಸೂಯಾ ಹೂಗಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.