ಕಲಬುರಗಿ | ಕನ್ನಡ ಮಾಧ್ಯಮ ಭವಿಷ್ಯ ರೂಪಿಸುತ್ತದೆ: ಬಸವರಾಜ ದೇಶಮುಖ
ಕಲಬುರಗಿ: ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಕೂಡ ಉನ್ನತ ಹುದ್ದೆಗೇರಿದ್ದಾರೆ, ವಿದ್ಯಾರ್ಥಿಗಳು ಶ್ರಮಪಟ್ಟು ಓದಬೇಕು, ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು.
ನಗರದ ದೊಡ್ಡಪ್ಪ ಅಪ್ಪ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವರ್ಷದ ವಿಜ್ಞಾನ ಚಟುವಟಿಕೆಗಳ ಸಮಾರೋಪ ಹಾಗೂ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಶರಣಬಸವ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಅನಿಲಕುಮಾರ ಬಿಡುವೆ ಮಾತನಾಡಿ, ನಾವು ಸ್ಪರ್ಧಾತ್ಮಕ ಯುಗದಲ್ಲಿದ್ದೇವೆ, ಒಂದು ಕಾಲದಲ್ಲಿ ಉತ್ತೀರ್ಣರಾಗಿದ್ದೀರಾ ? ಎಂದು ಮಾತ್ರ ಕೇಳುತ್ತಿದ್ದರು. ಆದರೆ ಇಂದು ಪ್ರತಿಶತ ಎಷ್ಟು ಅಂಕಗಳನ್ನು ಗಳಿಸಿ ಪಾಸಾಗಿದ್ದೀರಾ ಎಂದು ಕೇಳುತ್ತಿದ್ದಾರೆ. ಪಾಸಾಗುವುದು ಮುಖ್ಯವಲ್ಲ, ಏನನ್ನಾದರೂ ಸಾಧಿಸುವುದು ಮುಖ್ಯವಾಗಿದೆ ಎಂದರು.
ಇನ್ನೋರ್ವ ಅತಿಥಿಗಳಾದ ನಿವೃತ ಪ್ರಾಚಾರ್ಯ ನರೇಂದ್ರ ಬಡಶೇಶಿ, ಡಾ.ಮುಕೇಶ ಚೌಹಾಣ್ ಮಾತನಾಡಿದರು.
ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ರಾಮಕೃಷ್ಣ ರೆಡ್ಡಿ ಮಾತನಾಡಿ, ಕೇವಲ ವೈದ್ಯಕೀಯ, ಇಂಜಿನಿಯರಿಂಗ್ ಕ್ಷೇತ್ರಗಳಷ್ಟೇ ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ, ವಿದ್ಯಾರ್ಥಿಗಳು ಶ್ರಮವಹಿಸಿ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು .
ಪ್ರಾಚಾರ್ಯರಾದ ವಿನೋದಕುಮಾರ್ ಪತಂಗೆಯವರು ಸ್ವಾಗತಿಸಿ ವಾರ್ಷಿಕ ವರದಿ ಓದಿದರು. ವಿದ್ಯಾರ್ಥಿಗಳಿಗಾಗಿ ಕಾಲೇಜಿನಲ್ಲಿ ಏರ್ಪಡಿಸಿದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಅತ್ಯುತ್ತಮ ಮಾದರಿಗಳಿಗೆ ಪ್ರಥಮ ದ್ವಿತೀಯ ತೃತೀಯ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.