ಕಾಳಗಿ | ಹಿಂದೆ ಗುರು, ಮುಂದೆ ಗುರಿ ಇದ್ದವನು ಎತ್ತರಕ್ಕೆ ಬೆಳೆಯಬಲ್ಲ: ಮುರುಘೇಂದ್ರ ಶ್ರೀ
ಕಾಳಗಿ: ಪಿತೃಋಣ, ಭೂಮಿ ಋಣ ಹಾಗೂ ಗುರು ಋಣವನ್ನು ತೀರಿಸುವುದು ಪ್ರತಿಯೊಬ್ಬ ವ್ಯಕ್ತಿಯ ಪರಮ ಕರ್ತವ್ಯ. ಈ ಮೂರು ಋಣಗಳು ಜೀವನದ ಶ್ರೇಷ್ಠ ಋಣಗಳಾಗಿವೆ ಎಂದು ರಟಕಲ್ ಮುರುಘೇಂದ್ರ ಮಠದ ಶ್ರೀ ನೀಲಕಂಠ ದೇವರು ಅಭಿಪ್ರಾಯಪಟ್ಟರು.
ತಾಲೂಕಿನ ರಟಕಲ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ರೇವಣಸಿದ್ದೇಶ್ವರ ಶಾಲೆ ಹಾಗೂ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ 2002-03ನೇ ಸಾಲಿನ ವಿದ್ಯಾರ್ಥಿಗಳ 'ಗುರುವಂದನಾ' ಹಾಗೂ 'ವಾರ್ಷಿಕ ಸ್ನೇಹ ಸಮ್ಮೇಳನ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಇಂದು ತಮ್ಮ ಶಿಕ್ಷಕರನ್ನು ಸನ್ಮಾನಿಸುವ ಮೂಲಕ ಗುರುಋಣ ತೀರಿಸುತ್ತಿರುವುದು ಹೆಮ್ಮೆಯ ಸಂಗತಿ. ಜೀವನದಲ್ಲಿ ಗುರುವಿನ ಪಾತ್ರ ಅತ್ಯಂತ ದೊಡ್ಡದು. ಗುರು ಇದ್ದಾಗ ಮಾತ್ರ ವ್ಯಕ್ತಿ ತನ್ನ ಗುರಿಯನ್ನು ಮುಟ್ಟಲು ಸಾಧ್ಯ. ಯಾರಿಗೆ ಹಿಂದೆ ಗುರು ಮತ್ತು ಮುಂದೆ ಗುರಿ ಇರುತ್ತದೆಯೋ ಅವರು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯುತ್ತಾರೆ ಎಂದು ಪೂಜ್ಯರು ಹಾರೈಸಿದರು.
ನಿವೃತ್ತ ಶಿಕ್ಷಕ ಶಿವಪ್ರಕಾಶ್ ಹಿರೇಮಠ ಮಾತನಾಡಿ, ನಮಗೆ ಅಕ್ಷರ ಕಲಿಸಿ ಬದುಕಿಗೆ ಬೆಳಕಾದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನಾವು ಜೀವನದುದ್ದಕ್ಕೂ ಮರೆಯಬಾರದು ಎಂದರು.
ರಟಕಲ್ ನಡುವಿನ ಮಠದ ಪೂಜ್ಯ ರೇವಣಸಿದ್ದ ಶಿವಾಚಾರ್ಯರು ಹಾಗೂ ಗೌರಿಗುಡ್ಡದ ರೇವಣಸಿದ್ದ ಶರಣರು ಆಶೀರ್ವಚನ ನೀಡಿದರು. ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯಗುರು ಶಶಿಕಲಾ ಪಂಚಾಳ, ಗುರುಬಸಪ್ಪ ಪಾಟೀಲ, ರಾಮಕೃಷ್ಣ ಮುಚ್ಚಟ್ಟಿ ಸೇರಿದಂತೆ ಶಿಕ್ಷಕ ವೃಂದ ಹಾಗೂ ಹಳೆಯ ವಿದ್ಯಾರ್ಥಿಗಳಾದ ವೀರೇಶ ಬುಕ್ಕಟಗಿ, ಶಾಂತು ಮಮಶೆಟ್ಟಿ, ಸಿದ್ದಲಿಂಗಯ್ಯ ಹಾಲಮಠ, ಡಾ.ಪ್ರಭು ಹುಲಸಗೂಡ ಮತ್ತಿತರರು ಉಪಸ್ಥಿತರಿದ್ದರು.
ಮಲ್ಲಮ್ಮ ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಂಗಮ್ಮ ಸ್ವಾಗತಿಸಿದರೆ, ಆರುತಿ, ಅಪೂರ್ವ ಮತ್ತು ಅಪರ್ಣಾ ಪ್ರಾರ್ಥಿಸಿದರು. ಆಶಾ ಏರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.