ವಾಡಿ | ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ
ವಾಡಿ: ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು ಕೇವಲ ಅಂಕಗಳ ಬೆನ್ನತ್ತಿ ಓಡುತ್ತಿರುವುದರಿಂದ ಜೀವನ ಮೌಲ್ಯಗಳ ಕೊರತೆ ಎದ್ದು ಕಾಣುತ್ತಿದೆ ಎಂದು ಮಾತೆ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾವಿತ್ರಿ ಪಾಟೀಲ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಸೇಂಟ್ ಅಂಬ್ರೋಸ್ ಕಾನ್ವೆಂಟ್ ಶಾಲೆಯಲ್ಲಿ ಶನಿವಾರ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಹಾಗೂ ಫೆಡರೇಶನ್ ವತಿಯಿಂದ ಆಯೋಜಿಸಿದ್ದ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಸಂಘವು ಶಿಕ್ಷಣದಲ್ಲಿ ಕಳೆದುಹೋದ ಮೌಲ್ಯಗಳನ್ನು ಮರುಸ್ಥಾಪಿಸುವ ಹಾಗೂ ಸರ್ಕಾರಿ ಶಾಲೆಗಳ ಬಗ್ಗೆ ಜನರಲ್ಲಿರುವ ಅಪನಂಬಿಕೆಯನ್ನು ನಿವಾರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಗ್ರಾಮೀಣ ಭಾಗದ ಬಡ ಮಕ್ಕಳಿಗಾಗಿ ಹೊಸ ಯೋಜನೆ ರೂಪಿಸಲಾಗಿದ್ದು, ಪ್ರತಿ ತಿಂಗಳು ಒಂದು ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಅವರ ಜೀವನ ಸಂಘರ್ಷದ ಕುರಿತು ಕಾರ್ಯಾಗಾರ ನಡೆಸಲಾಗುವುದು. ಅಷ್ಟೇ ಅಲ್ಲದೆ, ಶಾಲೆ ಬಿಟ್ಟ ಪ್ರತಿಭಾವಂತ ಮಕ್ಕಳ ಮನೆಗಳಿಗೆ ಭೇಟಿ ನೀಡಿ, ಪೋಷಕರಿಗೆ ತಿಳಿಹೇಳಿ ಅವರನ್ನು ಮತ್ತೆ ಶಾಲೆಗೆ ಕರೆತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಮಾಜಿ ಬಿಆರ್‌ಪಿ ಮಲ್ಲಿಕಾರ್ಜುನ ಸೇಡಂ ಮಾತನಾಡಿ, "ಸಾವಿತ್ರಿಬಾಯಿ ಫುಲೆ ಅವರ ಸಾಧನೆಯ ಹಾದಿಯಲ್ಲಿ ನಾವು ಸಾಗಬೇಕು. ಅವರ ಶೈಕ್ಷಣಿಕ ಕ್ರಾಂತಿಗೆ ಬೆನ್ನೆಲುಬಾಗಿ ನಿಂತ ಶೇಖ್ ಫಾತಿಮಾ ಅವರ ತ್ಯಾಗವನ್ನೂ ನಾವು ಸ್ಮರಿಸಬೇಕು," ಎಂದರು.
ಕಾರ್ಯಕ್ರಮವನ್ನು ಸಂಘದ ಜಿಲ್ಲಾಧ್ಯಕ್ಷೆ ಸೇವಂತಾ ಚವ್ಹಾಣ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿಯರಾದ ಮಾಯಾದೇವಿ ರೋಣದ ಮತ್ತು ಶೈಲಜಾ ಕುಲಕರ್ಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯ ಮೇಲೆ ತಾಲೂಕು ಅಧ್ಯಕ್ಷೆ ನಾಗುಬಾಯಿ ಮಲಘಾಣ, ಸ್ಥಳೀಯ ಅಧ್ಯಕ್ಷೆ ಸುಮಿತ್ರಾ ದೊರೆ, ಕಾರ್ಯದರ್ಶಿ ಶಕುಂತಲಾ ಪೊದ್ದಾರ, ಸಿಸ್ಟರ್ ಗ್ರೇಸಿ, ಸಿಆರ್‌ಪಿ ಈರಾಬಾಯಿ, ಕಸಾಪ ವಲಯ ಅಧ್ಯಕ್ಷ ಸಿದ್ಧಯ್ಯಶಾಸ್ತ್ರೀ ನಂದೂರಮಠ ಹಾಗೂ ರೇವಣಸಿದ್ದಪ್ಪ ರೋಣದ ಉಪಸ್ಥಿತರಿದ್ದರು.
ಮಂಜುಳಾ ಪ್ರಾಸ್ತಾವಿಕವಾಗಿ ಮಾತನಾಡಿದರು, ಚಂದ್ರಿಕಾ ಪ್ರಾರ್ಥಿಸಿದರು, ಶ್ರೀದೇವಿ ಸ್ವಾಗತಿಸಿದರೆ, ಸವಿತಾ ಕಾರ್ಯಕ್ರಮ ನಿರೂಪಿಸಿದರು.