Kalaburagi | ಸಚಿವ ಸಂಪುಟದಲ್ಲಿ ಕಲ್ಯಾಣ ಕರ್ನಾಟಕದ ಮುಸ್ಲಿಂ ಶಾಸಕರಿಗೆ ಅವಕಾಶ ನೀಡದಿರುವುದು ಅನ್ಯಾಯ : ಮುಖಂಡರ ಅಸಮಾಧಾನ

Update: 2026-08-06 21:45 IST

ಕಲಬುರಗಿ : ರಾಜ್ಯ ಸಚಿವ ಸಂಪುಟದಲ್ಲಿ ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಮುಸ್ಲಿಂ ಶಾಸಕರಿಗೆ ಪ್ರಾತಿನಿಧ್ಯ ನೀಡದಿರುವುದಕ್ಕೆ ಮುಸ್ಲಿಂ ಸಮುದಾಯದ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಪಕ್ಷವು ಸಮುದಾಯದ ಬೇಡಿಕೆಗಳನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.

ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಅಫ್ಝಲ್ ಮೆಹಮೂದ್, ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಮುಸ್ಲಿಂ ಶಾಸಕರಿಗೆ ಸಚಿವ ಸ್ಥಾನ ದೊರೆಯುವ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಈಡೇರದಿರುವುದು ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕರು ಹಾಗೂ ಹೈಕಮಾಂಡ್ ಮುಸ್ಲಿಂ ಸಮುದಾಯವನ್ನು ಕೇವಲ ಮತ ಬ್ಯಾಂಕ್ ಆಗಿ ಪರಿಗಣಿಸುತ್ತಿರುವ ಭಾವನೆ ಮೂಡಿದೆ. ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ಹಾಗೂ ಅಧಿಕಾರ ನೀಡುವಲ್ಲಿ ನಿರ್ಲಕ್ಷ್ಯ ತೋರಲಾಗಿದೆ ಎಂದು ಅವರು ಆರೋಪಿಸಿದರು.

ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಬೀದರ್‌ನ ರಹೀಂ ಖಾನ್ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಈ ಬಾರಿ ಅವರನ್ನು ಅಥವಾ ಮಹಿಳಾ ಕೋಟಾದಡಿ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಅವರಿಗೆ ಸಚಿವ ಸ್ಥಾನ ನೀಡಲಾಗಬಹುದು ಎಂಬ ವಿಶ್ವಾಸವಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವಕಾಶ ನೀಡದಿರುವುದು ಬೇಸರ ತಂದಿದೆ ಎಂದು ಹೇಳಿದರು.

ಸಮುದಾಯಕ್ಕೆ ಆಗಿರುವ ಅನ್ಯಾಯದ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಿ ಚರ್ಚಿಸುವ ಕುರಿತು ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೌಲಾನಾ ಶರೀಫ್‌ ಸಾಬ್ ಮಜರಿ, ಆರೀಫ್ ಮನಿಯಾರ್, ಎಚ್.ಎಂ. ಜಾನಿ, ಮೆಹಬೂಬ್ ಅಲಿ, ಅಬ್ದುಲ್ ರವೂಫ್ ಖುರೇಷಿ, ಅಬ್ದುಲ್ ಖಾದರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News