Kalaburagi | ಜನಪದ ಸಂಸ್ಕೃತಿ ಉಳಿಸುವ ಹೊಣೆ ಎಲ್ಲರದು: ಗುರುರಾಜ ಕುಲಕರ್ಣಿ

Update: 2026-08-06 21:37 IST

ಕಲಬುರಗಿ : ಜನಪದ ಸಂಸ್ಕೃತಿಯು ಜೀವನ ಮೌಲ್ಯಗಳು, ಸಂಸ್ಕಾರ ಹಾಗೂ ನ್ಯಾಯದ ಅರಿವನ್ನು ಬೆಳೆಸುವ ಶಕ್ತಿಯುತ ಮಾಧ್ಯಮವಾಗಿದ್ದು, ಆಧುನಿಕ ಯುಗದಲ್ಲಿ ಮೊಬೈಲ್ ಮತ್ತು ಕಂಪ್ಯೂಟರ್‌ಗಳ ಪ್ರಭಾವದಿಂದ ಮರೆಯಾಗುತ್ತಿರುವ ಜನಪದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ನಿವೃತ್ತ ಕೃಷಿ ಅಧಿಕಾರಿ ಗುರುರಾಜ ಕುಲಕರ್ಣಿ ಹೇಳಿದರು.

ನಗರದ ಸುಖಿ ಕಲಾಭವನದಲ್ಲಿ ರವಿವರ್ಮ ಕಲಾ ಸಾಹಿತ್ಯ ಸಾಂಸ್ಕೃತಿಕ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ “ಜನಪದ ಝೇಂಕಾರ” ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನಪದದಲ್ಲಿ ಬದುಕಿನ ಅನುಭವಗಳು, ಸಂಸ್ಕಾರ, ನೈತಿಕ ಮೌಲ್ಯಗಳು ಹಾಗೂ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬ ಸಂದೇಶಗಳು ಅಡಗಿವೆ. ಇಂತಹ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಗಾಯಕ ಕಿರಣ್ ಪಾಟೀಲ್ ಮಾತನಾಡಿ, ಜನಪದ ಕಲೆಗಳು ನಮ್ಮ ನಾಡಿನ ಸಾಂಸ್ಕೃತಿಕ ಸಂಪತ್ತಾಗಿದ್ದು, ಅವುಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಗುರು ಉಪದೇಶ ಪತ್ರಿಕೆಯ ಸಂಪಾದಕ ಗುಂಡೇರಾವ್ ಭಾಗವಹಿಸಿದ್ದರು. ರವಿವರ್ಮ ಕಲಾ ಸಾಹಿತ್ಯ ಸಾಂಸ್ಕೃತಿಕ ಸೇವಾ ಸಂಸ್ಥೆಯ ಕಾರ್ಯದರ್ಶಿ ಶಿವಶಂಕರ್ ಬಿ. ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಎಚ್.ಎಸ್. ಬರಗಾಲಿ (ಕುಸನೂರು) ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಜನಪದ ಕಲಾವಿದ ಯಲ್ಲಾಲಿಂಗ ಅವರು ಜಾನಪದ ಗಾಯನ ಹಾಗೂ ದಾಸವಾಣಿ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು. ನಾಗಭೂಷಣ ಅಗಸ್ತಿ, ಮಲ್ಲಿಕಾರ್ಜುನ್ ಜಾನಿ, ಕಾವೇರಿ ಜಿ. ಹಿರೇಮಠ ಹಾಗೂ ಅನ್ನಪೂರ್ಣ ಎನ್. ಚೌವ್ವಾಣ ಸೇರಿದಂತೆ ಹಲವು ಕಲಾವಿದರು ತಮ್ಮ ಸುಮಧುರ ಗಾಯನದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಕಾರ್ಯಕ್ರಮದ ಕೊನೆಯಲ್ಲಿ ಮಲ್ಲಿಕಾರ್ಜುನ್ ದೊಡ್ಡಿ ಅವರು ವಂದನಾರ್ಪಣೆ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News