ಕಾಳಗಿ | ವಿದ್ಯುತ್ ತಂತಿ ತಗುಲಿ ರೈತ ಮೃತ್ಯು ; ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
ಜೆಸ್ಕಾಂ ಕಚೇರಿ ಮುಂದೆ ಮೃತದೇಹವಿಟ್ಟು ಪ್ರತಿಭಟನೆ
ಕಾಳಗಿ : ತಾಲೂಕಿನ ಗೋಟೂರ ಗ್ರಾಮದ ಹೊಲವೊಂದರಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದ ಪರಿಣಾಮ ರೈತ ಭೀಮಾಶಂಕರ ದೇವೀಂದ್ರಪ್ಪ ಅರನತ್ತಿ (30) ಗುರುವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಭೀಮಾಶಂಕರ ಅವರು ಎಂದಿನಂತೆ ಬೆಳಿಗ್ಗೆ ಕೃಷಿ ಕೆಲಸಕ್ಕಾಗಿ ಹೊಲಕ್ಕೆ ತೆರಳಿದ್ದರು. ಕೆಲಸ ಮುಗಿಸಿ ಮನೆಗೆ ಮರಳುವ ವೇಳೆ ಹೊಲದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.
ಘಟನೆಗೆ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಗ್ರಾಮಸ್ಥರು ಮತ್ತು ರೈತರು, ಮೃತದೇಹವನ್ನು ಜೆಸ್ಕಾಂ ಕಚೇರಿ ಎದುರು ಇರಿಸಿ ನಾಲ್ಕೈದು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ಮೂರು–ನಾಲ್ಕು ದಿನಗಳ ಹಿಂದೆಯೇ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿದ ಜೆಸ್ಕಾಂ ಎಇಇ ಹಾಗೂ ಜೆಇ ಅವರನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು. ಜೆಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ರೈತ ಬಲಿಯಾಗಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಮೃತ ಭೀಮಾಶಂಕರ ಅವರು ಕುಟುಂಬದ ಆಧಾರಸ್ತಂಭವಾಗಿದ್ದು, ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳನ್ನು ಅಗಲಿದ್ದಾರೆ. ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರೈತ ಮುಖಂಡರಾದ ವೀರಣ್ಣ ಗಂಗಾಣಿ, ಗ್ರಾಮಸ್ಥರಾದ ಶಿವಕುಮಾರ್ ಕಮಕನೂರ, ಮಲ್ಕಪ್ಪ ಜಮಾದಾರ, ಮಹೇಶ ಸಾವಳಗಿ, ಪ್ರಕಾಶ ಮಡಿವಾಳ, ಬಾಬು ಬುಡನೂರ, ಶಿವಶರಣರೆಡ್ಡಿ ಕಾಮರೆಡ್ಡಿ, ಮಲ್ಲಿಕಾರ್ಜುನ ಸಿಂಘೆ, ಅಮರ ಗವ್ಹಾಂರ, ಅಮೀರಮಿಯ್ಯಾ ಸೇರಿದಂತೆ ಅನೇಕರು ಇದ್ದರು.
ಕಾಳಗಿ ಸಿಪಿಐ ಜಗದವೇಪ್ಪ ಪಾಳ ಸ್ಥಳದಳಲ್ಲಿದ್ದರು.