ಕಲಬುರಗಿ | ಶರಣಬಸವೇಶ್ವರ ವಿದ್ಯಾವರ್ಧಕ ಸಂಘಕ್ಕೆ ಬೆಸ್ಟ್ ಎಜುಕೇಶನ್ ಸೊಸೈಟಿ ಪ್ರಶಸ್ತಿ ಪ್ರದಾನ
ಕಲಬುರಗಿ: ಕಲಬುರಗಿ ನಗರದ ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿರುವ ದೊಡ್ಡಪ್ಪ ಅಪ್ಪ ಸಭಾಂಗಣದಲ್ಲಿ ಶನಿವಾರ ನಡೆದ 27ನೇ ಐಎಸ್‍ಟಿಇ ರಾಜ್ಯ ಮಟ್ಟದ ಪ್ರಾಧ್ಯಾಪಕರ ಸಮಾವೇಶದಲ್ಲಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘಕ್ಕೆ ನೀಡಲಾಗುವ ಪ್ರತಿಷ್ಠಿತ ಐಎಸ್‍ಟಿಇ “ಬೆಸ್ಟ್ ಎಜುಕೇಶನ್ ಸೊಸೈಟಿ” ಪ್ರಶಸ್ತಿಯನ್ನು ಸಂಘದ ಅಧ್ಯಕ್ಷರಾದ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಅವರಿಗೆ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್‍ನ ರಾಷ್ಟ್ರೀಯ ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳು ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಡಾ.ಅವ್ವಾಜಿ, ಈ ಪ್ರಶಸ್ತಿಯನ್ನು ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಲಿಂಗೈಕ್ಯ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಅವರಿಗೆ ಅರ್ಪಿಸುವುದಾಗಿ ಹೇಳಿದರು.
ಅವರು ಶಿಕ್ಷಣ ಸಂಸ್ಥೆಗಳ ಸರಪಳಿಯನ್ನು ಸ್ಥಾಪಿಸುವ ಮೂಲಕ ಮತ್ತು ಉತ್ತರ ಕರ್ನಾಟಕದ ಮೊದಲ ಖಾಸಗಿ ವಿಶ್ವವಿದ್ಯಾಲಯವಾದ ಶರಣಬಸವ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಮೂಲಕ ಈ ಪ್ರದೇಶದ ಜನರ ಶೈಕ್ಷಣಿಕ ಸಬಲೀಕರಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರವನ್ನು ಸ್ಥಾಪಿಸುವ ಜವಾಬ್ದಾರಿಯನ್ನು ಸಹ ಅಪ್ಪಾಜಿಯವರು ವಹಿಸಿದ್ದರು. ನಂತರ ಇದನ್ನು ಗುಲಬರ್ಗಾ ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೇರಿಸಲಾಯಿತು. ಇದು ಮೊದಲ ಬಾರಿಗೆ ಉನ್ನತ ಶಿಕ್ಷಣದ ಮಾರ್ಗಗಳನ್ನು ಈ ಪ್ರದೇಶದ ಜನರ ಮನೆ ಬಾಗಿಲಿಗೆ ತಂದಿತು ಎಂದರು.
ಈ ಪ್ರಶಸ್ತಿಯು ಡಾ.ಅಪ್ಪಾಜಿಯವರ ಜೀವಮಾನದ ಸಾಧನೆಯನ್ನು ಮತ್ತು ಅವರ ಕನಸನ್ನು ನನಸಾಗಿಸಲು ಸಹಾಯ ಮಾಡಿದ ಶಿಕ್ಷಣ ಸಂಸ್ಥೆಗಳ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಸಮರ್ಪಣೆ ಮತ್ತು ನಿಮ್ಮೆಲ್ಲರ ಕಠಿಣ ಪರಿಶ್ರಮವನ್ನು ಪ್ರತಿಬಿಂಬಿಸುತ್ತದೆ ಎಂದು ಡಾ.ಅವ್ವಾಜಿ ಹೇಳಿದರು.
ಐಎಸ್‍ಟಿಇ ಕರ್ನಾಟಕ ವಿಭಾಗದ ಅಧ್ಯಕ್ಷ ಡಾ. ಸುರೇಶ್ ಡಿ. ಎಸ್. ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶವನ್ನು ಪ್ರಮುಖ ಶೈಕ್ಷಣಿಕ ಕೇಂದ್ರವನ್ನಾಗಿ ಪರಿವರ್ತಿಸಲು ಡಾ.ಅಪ್ಪಾಜಿ ಅವರು ಮಾಡಿದ ಅವಿಶ್ರಾಂತ ಪ್ರಯತ್ನಗಳಿಗಾಗಿ ಅವರಿಗೆ ಗೌರವ ಸಲ್ಲಿಸಿದರು ಮತ್ತು ಡಾ.ಅವ್ವಾಜಿಯವರು ಡಾ.ಅಪ್ಪಾಜಿಯವರ ಪರಂಪರೆಯನ್ನು ಮುಂದುವರೆಸುತ್ತಿದ್ದಾರೆಂದರು.
ಈ ಸಂದರ್ಭದಲ್ಲಿ ಐಎಸ್‍ಟಿಇ ರಾಷ್ಟ್ರೀಯ ಅಧ್ಯಕ್ಷ ಡಾ. ಪ್ರತಾಪ್‍ಸಿನ್ಹ ಕಾಕಾಸಾಹೇಬ ದೇಸಾಯಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ ಸೇರಿದಂತೆ ಇತರ ಪ್ರಮುಖರು ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವವಿದ್ಯಾಲಯದ ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ ಸ್ವಾಗತಿಸಿದರು. ಪುಣೆಯ ಎಂಐಟಿಯ ಪ್ರೊ. ವೀರೇಂದ್ರ ವೀರಭದ್ರ ಶೆಟ್ಟಿ ಮತ್ತು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಓರುಗಂಟಿ ಆಂಜನೇಯುಲು ವಿಶೇಷ ಉಪನ್ಯಾಸ ನೀಡಿದರು.