×
Ad

ಏಳು ದಿನಗಳ ಸ್ವತಂತ್ರ ಟಿಕೆಟ್ ಬಸ್ ಪ್ರಯಾಣ ಪುನರಾರಂಭಕ್ಕೆ ಸರಕಾರಕ್ಕೆ ಒತ್ತಾಯ

ಕಲಬುರಗಿ ಹವ್ಯಾಸಿ ಪ್ರವಾಸಿ ಮಾರ್ಗದರ್ಶಿ ಬಳಗದಿಂದ ಮನವಿ

Update: 2026-01-24 19:06 IST

ಕಲಬುರಗಿ: ಹವ್ಯಾಸಿ ಛಾಯಾಚಿತ್ರಕಾರರು, ಪ್ರವಾಸಿ ಲೇಖಕರು, ಪ್ರವಾಸಿಗರು ಹಾಗೂ ಶಾಲಾ–ಕಾಲೇಜು ವಿದ್ಯಾರ್ಥಿಗಳು ಮತ್ತು ತರಬೇತಿದಾರರಿಗೆ ಅನುಕೂಲವಾಗುವಂತೆ, ಏಳು ದಿನಗಳ ಸ್ವತಂತ್ರ ಟಿಕೆಟ್ ಬಸ್ ಪ್ರಯಾಣ ಯೋಜನೆಯನ್ನು ಪುನರಾರಂಭಿಸಿ ಕರ್ನಾಟಕ ರಾಜ್ಯದೊಳಗೆ ಅವಕಾಶ ನೀಡಬೇಕು ಎಂದು ಕಲಬುರಗಿ ಹವ್ಯಾಸಿ ಪ್ರವಾಸಿ ಮಾರ್ಗದರ್ಶಿ ಬಳಗವು ಸರ್ಕಾರವನ್ನು ಒತ್ತಾಯಿಸಿದೆ.

2007ರಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಈಶಾನ್ಯ ಕೆಆರ್‌ಟಿಸಿ) ವತಿಯಿಂದ ರೂ.700 ದರದ ಏಳು ದಿನಗಳ ಸ್ವತಂತ್ರ ಟಿಕೆಟ್ ನೀಡಲಾಗುತ್ತಿತ್ತು. ಈ ಟಿಕೆಟ್ ಮೂಲಕ ಏಪ್ರಿಲ್, ಮೇ, ಜೂನ್, ಅಕ್ಟೋಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಮಾನ್ಯತೆ ಅವಧಿಯೊಳಗೆ ಕರ್ನಾಟಕದ ಎಲ್ಲ ಭಾಗಗಳಿಗೆ ಸಾಮಾನ್ಯ ಹಾಗೂ ವೇಗದೂತ ಬಸ್‌ಗಳಲ್ಲಿ ಪ್ರಯಾಣಿಸುವ ಅವಕಾಶ ಇತ್ತು. ಆದರೆ ಕಳೆದ 19 ವರ್ಷಗಳಿಂದ ಈ ಯೋಜನೆಯನ್ನು ರದ್ದುಪಡಿಸಲಾಗಿದೆ ಎಂದು ಬಳಗದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಟಿಕೆಟ್ ವ್ಯವಸ್ಥೆಯಿಂದ ಹವ್ಯಾಸಿ ಛಾಯಾಚಿತ್ರಕಾರರು, ಪ್ರವಾಸಿ ಲೇಖಕರು ಹಾಗೂ ಕಲಾವಿದರು ಒಂದಾಗಿ ಐತಿಹಾಸಿಕ ಪ್ರವಾಸಿ ತಾಣಗಳು, ಸ್ಮಾರಕಗಳು ಮತ್ತು ನಿಸರ್ಗ ಸೌಂದರ್ಯವನ್ನು ವೀಕ್ಷಿಸಿ, ಛಾಯಾಚಿತ್ರ ಸೆರೆಹಿಡಿಯಲು ಬಹಳ ಅನುಕೂಲವಾಗುತ್ತಿತ್ತು ಎಂದು ತಿಳಿಸಿದ್ದಾರೆ.

ಇದೇ ರೀತಿ ಹಂಪಿ ಉತ್ಸವದ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ‘ಕಲಬುರಗಿ ಉತ್ಸವ’ ಆರಂಭಿಸಬೇಕು, ಸರ್ಕಾರಿ ಶಾಲೆ–ಕಾಲೇಜುಗಳಲ್ಲಿ ಪ್ರವಾಸೋದ್ಯಮ ಕುರಿತ ಉಪನ್ಯಾಸ ಮಾಲೆಗಳು ಹಾಗೂ ಮಾರ್ಗದರ್ಶನ ಕಾರ್ಯಕ್ರಮಗಳನ್ನು ನಡೆಸಿ ಜಾಗೃತಿ ಮೂಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈಗಾಗಲೇ ಸ್ವಯಂಪ್ರೇರಣೆಯಿಂದ ಸೇವೆ ಸಲ್ಲಿಸುತ್ತಿರುವ ಸಂಪನ್ಮೂಲ ವ್ಯಕ್ತಿಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹವ್ಯಾಸಿ ಪ್ರವಾಸಿ ಮಾರ್ಗದರ್ಶಿ ಬಳಗದ ಗೌರವ ಅಧ್ಯಕ್ಷ ನಾರಾಯಣ ಎಂ. ಜೋಶಿ ಹಾಗೂ ಗೌರವ ಕಾರ್ಯದರ್ಶಿ ಬಿ.ಎಂ. ರಾವೂರ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News