×
Ad

ಕಲಬುರಗಿ: ʼಪಾಕಿಸ್ತಾನ ಪರ ಪ್ರೇಮʼ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪ; ಮಾಧ್ಯಮಗಳ ವಿರುದ್ಧ ದೂರು

Update: 2025-04-27 21:41 IST

ಕಲಬುರಗಿ: ನಗರದ ರಸ್ತೆಯ ಮೇಲೆ ಬಜರಂಗ ದಳದ ಕಾರ್ಯಕರ್ತರು ಅಂಟಿಸಿರುವ ಪಾಕ್ ಧ್ವಜವನ್ನು ಕಿತ್ತಾಕಿದ ಮುಸ್ಲಿಂ ಮಹಿಳೆಯರಿಬ್ಬರು ʼಪಾಕ್ ಪ್ರೇಮಿಗಳುʼ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿ ಕೋಮು ಪ್ರಚೋದನೆ ನೀಡಿದ್ದಾರೆಂದು ಆರೋಪಿಸಿ ಸುದ್ದಿ ಮಾಧ್ಯಮಗಳು, ಬಜರಂಗ ದಳ ಹಾಗೂ ಶ್ರೀರಾಮ ಸೇನೆಯ ಗೌರವಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ವಿರುದ್ಧ ಇಲ್ಲಿನ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕೆಂದು ದೂರು ನೀಡಲಾಗಿದೆ.

ʼಪಬ್ಲಿಕ್ ಟಿವಿʼ, ʼರಿಪಬ್ಲಿಕ್ ಕನ್ನಡ ಟಿವಿʼ, ʼಪವರ್ ಟಿವಿʼ, ಅಂದೋಲಾದ ಸಿದ್ಧಲಿಂಗ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜನತಾ ಪರಿವಾರ ಸಂಘಟನೆ ಪದಾಧಿಕಾರಿಗಳು ರೋಜಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಗರದ ಪ್ರಮುಖ ರಸ್ತೆಗಳಲ್ಲಿ ಪಾಕಿಸ್ತಾನ ಧ್ವಜವನ್ನು ಅಂಟಿಸಿದ ಘಟನೆಗೆ ಕೋಮು ಬಣ್ಣ ನೀಡಿದ ಮಾಧ್ಯಮಗಳು ಬಳಿಕ ಧ್ವಜಗಳನ್ನು ರಸ್ತೆಗೆ ಅಂಟಿಸಿರುವುದು ಬಜರಂಗ ದಳದ ಕಾರ್ಯಕರ್ತರು ಎಂದು ಗೊತ್ತಾದ ಬಳಿಕ ಬಜರಂಗ ದಳದ ಪರವಾಗಿ ವಾಹಿನಿಗಳು ಸುದ್ದಿ ಮಾಡಿವೆ. ಅಲ್ಲದೆ ಮುಸ್ಲಿಂ ಮಹಿಳೆಯರು ಧ್ವಜ ಕಿತ್ತುವುದರ ಮೂಲಕ ʼಪಾಕಿಸ್ತಾನ ಪ್ರೇಮʼ ಮೆರೆದಿದ್ದಾರೆ ಎಂದು ಮಾಧ್ಯಮದಲ್ಲಿ ಬಿತ್ತರಿಸಿದ್ದಾರೆ. ಈ ತರಹದ ಸುಳ್ಳು ಸುದ್ದಿಗಳನ್ನು ತಮ್ಮ ಚಾನೆಲ್ ಗಳಲ್ಲಿ ಪ್ರಸಾರ ಮಾಡಿ ಕೋಮು ಪ್ರಚೋದನೆಗೆ ಪ್ರಯತ್ನಿಸಿದ ಟಿವಿ ಮಾಧ್ಯಮಗಳ ವಿರುದ್ಧ ಪ್ರಕರಣ ದಾಖಲಿಸಿ ಅವರುಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಜೊತೆಗೆ ನಗರದಲ್ಲಿ ಕೋಮು ಸೌಹಾರ್ದ ಕೆಡಿಸಲು ಪ್ರಯತ್ನಿಸಿರುವ ಬಜರಂಗ ದಳದ ಕಾರ್ಯಕರ್ತರು, ಅಂದೋಲಾದ ಸಿದ್ಧಲಿಂಗ ಸ್ವಾಮೀಜಿ ವಿರುದ್ಧವೂ ಕ್ರಮ ಜರುಗಿಸಬೇಕೆಂದು ದೂರು ನೀಡಿದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೋಮು ಪ್ರಚೋದನೆಗೆ ಧಕ್ಕೆ ತರುವ ಕೆಲಸ ಮಾಡಿರುವ ಮಾಧ್ಯಮ ಮತ್ತು ಜನರ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ ಅವರು, ನಗರ ಪೊಲೀಸ್ ಆಯುಕ್ತ ಹಾಗೂ ಡಿಸಿಪಿ ಅವರಿಗೂ ಸುಳ್ಳು ಸುದ್ದಿ ಪ್ರಚಾರದ ಲಿಂಕ್ ಗಳು ಸಹಿತ ದೂರು ನೀಡಿದ್ದಾರೆ.

ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಸಿರಾಜ್ ಶಾಬ್ದಿ, ಆಕಾಶ್ ರಿಡ್ಲಾನ್, ಶೇಖ್ ಸೈಫನ್, ಖಾಲೀದ್ ಅಬ್ರಾರ್, ನಜೀರ್ ಅಹ್ಮದ್ ಸೇರಿದಂತೆ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News