ಕಲಬುರಗಿ | ತೊಗರಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ 2ನೇ ದಿನಕ್ಕೆ ಕಾಲಿಟ್ಟ ರೈತರ ಧರಣಿ
ಪ್ರತಿ ಕ್ವಿಂಟಲ್ ತೊಗರಿಗೆ 12,500 ರೂ. ನೀಡುವಂತೆ ಆಗ್ರಹ
ಕಲಬುರಗಿ: ತೊಗರಿಗೆ 12,500 ರೂ. ಬೆಂಬಲ ಬೆಲೆ ನೀಡುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ವತಿಯಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಶುಕ್ರವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಪ್ರತಿ ಕ್ವಿಂಟಲ್ ತೊಗರಿಗೆ 12,500 ರೂ. ಬೆಂಬಲ ಬೆಲೆ ನೀಡಬೇಕು, ಹಾಲು ಉತ್ಪಾದಕರ ಸಹಕಾರ ಸಂಘಗಳ (ಕೆಎಂಎಫ್) ಮಾದರಿಯಲ್ಲಿ ತೊಗರಿ ಖರೀದಿ ಕೇಂದ್ರ ಸ್ಥಾಪಿಸಬೇಕು, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ತಲಾ 1,000 ರೂಪಾಯಿ ಪ್ರೋತ್ಸಾಹಧನ ನೀಡಬೇಕು. ಹೊರದೇಶದ ತೊಗರಿಗೆ ಶೇ.50ರಷ್ಟು ಆಮದು ಶುಲ್ಕ ಹಾಕಬೇಕು, ತೊಗರಿ ತುರ್ತು ಖರೀದಿ ಕೇಂದ್ರ ಸ್ಥಾಪನೆ, ಬೆಳೆ ವಿಮೆ ಮಂಜೂರು ಸೇರಿದಂತೆ ಹಲವು ಬೇಡಿಕೆಗಳು ಈಡೇರಿಸಬೇಕೆಂದು ರೈತರು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.
ಗುರುವಾರ ಬೆಳಗ್ಗೆ ಪ್ರಾರಂಭವಾದ ಆಹೋರಾತ್ರಿ ಧರಣಿ ಸತ್ಯಾಗ್ರಹದ ಸ್ಥಳದಲ್ಲೇ ರೈತರು ಊಟ ಸವಿದರು. ಟ್ರ್ಯಾಕ್ಟರ್ ಹಾಗೂ ಎತ್ತಿನ ಬಂಡಿಗಳೊಂದಿಗೆ ನಡೆಯುತ್ತಿರುವ ಧರಣಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿ, ರೈತರ ಹೋರಾಟಕ್ಕೆ ಬೆಂಬಲಿಸಿದರು.
ಈ ವೇಳೆ ಮಾತನಾಡಿದ ರೈತ ಮುಖಂಡರು, ತೊಗರಿ ಈ ಭಾಗದ ವಾಣಿಜ್ಯ ಬೆಳೆ ಆಗಿದ್ದಲ್ಲದೆ ಆರ್ಥಿಕತೆ ನಿರ್ಧರಿಸುವ ಬೆಳೆಯಾಗಿದೆ. ಹಾಗಾಗಿ ಕನಿಷ್ಠ ಬೆಂಬಲ ಬೆಲೆಯನ್ನಾದರೂ ಘೋಷಿಸಬೇಕು, ಈ ಕುರಿತು ವಿಶೇಷ ಸದನದಲ್ಲಿ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮುಖಂಡರಾದ ಶರಣಬಸಪ್ಪ ಮಾಮಶೆಟ್ಟಿ, ಭೀಮಾಶಂಕರ ಮಾಡ್ಯಾಳ, ಮೌಲಾ ಮುಲ್ಲಾ, ಉಮಾಪತಿ ಪಾಟೀಲ್, ಕರೆಪ್ಪ ಕರಗೊಂಡ, ಸಿದ್ದು ಎಸ್.ಎಲ್, ಸಿದ್ದಪ್ಪ ಕಲಶೆಟ್ಟಿ, ಮತ್ತಿತ್ತರರು ಇದ್ದರು.