ಆಳಂದ | ಸಿಯುಕೆಯಲ್ಲಿ ಮೀಸಲಾತಿ ನೀತಿ ಅಕ್ಷರಶಃ ಜಾರಿ : ಪ್ರೊ.ಬಟ್ಟು ಸತ್ಯನಾರಾಯಣ
ಆಳಂದ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ವು ಭಾರತ ಸರ್ಕಾರದ ಮೀಸಲಾತಿ ನೀತಿಯನ್ನು ಅಕ್ಷರಶಃ ಹಾಗೂ ಪರಿಣಾಮಕಾರಿಯಾಗಿ ಜಾರಿಗೆ ತಂದಿದೆ ಎಂದು ಸಿಯುಕೆಯ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
ತಾಲೂಕಿನ ಕಡಗಂಚಿ ಸಮೀಪದ ಸಿಯುಕೆಗೆ ಭೇಟಿ ನೀಡಿದ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ತಂಡದೊಂದಿಗೆ ಅವರು ಮಾತನಾಡಿದರು.
ಕೇಂದ್ರ ಶಿಕ್ಷಣ ಸಂಸ್ಥೆಗಳ ಕಾಯ್ದೆ–2019 ಹಾಗೂ ಅದರ ಅನುಷ್ಠಾನವನ್ನು ಅಧ್ಯಯನ ಮಾಡುವ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆಯ ನಿಯೋಗವು ಸಿಯುಕೆಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದಲ್ಲಿ ಅನುಸರಿಸಲಾಗುತ್ತಿರುವ ಮೀಸಲಾತಿ ವ್ಯವಸ್ಥೆಯ ಸಂಪೂರ್ಣ ವಿವರಗಳನ್ನು ಕುಲಪತಿಗಳು ನಿಯೋಗಕ್ಕೆ ನೀಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗ, ಆರ್ಥಿಕವಾಗಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗಗಳಿಗೆ ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ಸಮಾನ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಮೀಸಲಾತಿ ನೀತಿಯನ್ನು ಕೇವಲ ಕಾಗದದ ಮಟ್ಟದಲ್ಲಿ ಮಾತ್ರವಲ್ಲದೆ, ನೇಮಕಾತಿ, ಪ್ರವೇಶ ಪ್ರಕ್ರಿಯೆ, ಆಡಳಿತ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಎಲ್ಲ ಹಂತಗಳಲ್ಲೂ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ. ಈ ನಿಟ್ಟಿನಲ್ಲಿ ಸಿಯುಕೆಯ ಕೈಗೊಂಡಿರುವ ಕ್ರಮಗಳನ್ನು ಕೇಂದ್ರ ಸರ್ಕಾರವೂ ಶ್ಲಾಘಿಸಿದೆ ಎಂದು ಕುಲಪತಿ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಡಾ. ರಾಕೇಶ್ ಕುಮಾರ್ ಕೆ., ಐಎಎಸ್, ನಿವೃತ್ತ ಐಎಎಸ್ ಅಧಿಕಾರಿ ಇ. ವೆಂಕಟಯ್ಯ, ಸಮಾಜ ಕಲ್ಯಾಣ ಇಲಾಖೆಯ ಸಲಹೆಗಾರರು ಹಾಗೂ ಎಸ್‌ಸಿಎಸ್‌ಪಿ–ಎಸ್‌ಟಿಪಿ ನೋಡಲ್ ಏಜೆನ್ಸಿಯ ಪ್ರತಿನಿಧಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಸಿಯುಕೆಯ ಅಧಿಕಾರಿಗಳೊಂದಿಗೆ ವಿವರವಾದ ಚರ್ಚೆ ನಡೆಸಿದರು.
ಸಭೆಯಲ್ಲಿ ಕಾಯ್ದೆಯ ಅನುಷ್ಠಾನ, ಮೀಸಲಾತಿ ಸಂಬಂಧಿತ ಅಂಕಿಅಂಶಗಳು, ಎದುರಾಗುತ್ತಿರುವ ಸವಾಲುಗಳು ಹಾಗೂ ಭವಿಷ್ಯದ ಕ್ರಮಗಳ ಕುರಿತು ಸಮಗ್ರವಾಗಿ ಅಭಿಪ್ರಾಯ ವಿನಿಮಯ ನಡೆಯಿತು.
ಈ ಸಭೆಯಲ್ಲಿ ಸಿಯುಕೆಯ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ, ಸಮಾನ ಅವಕಾಶ ಕೋಶದ ಸಂಪರ್ಕ ಅಧಿಕಾರಿ ಪ್ರೊ. ದೇವರಾಜಪ್ಪ, ಕಾನೂನು ನಿಕಾಯದ ಡೀನ್ ಪ್ರೊ. ಬಸವರಾಜ ಕುಬಕಡ್ಡಿ, ಇಡಬ್ಲ್ಯೂಎಸ್ ಕೋಶದ ಸಂಪರ್ಕ ಅಧಿಕಾರಿ ಡಾ. ಗಣಪತಿ ಬಿ. ಸಿನ್ನೂರ, ಒಬಿಸಿ ಕೋಶದ ಸಂಪರ್ಕ ಅಧಿಕಾರಿ ಡಾ. ಬಸವರಾಜ ಎಂ.ಎಸ್., ಅಲ್ಪಸಂಖ್ಯಾತ ಕೋಶದ ಸಂಪರ್ಕ ಅಧಿಕಾರಿ ಡಾ. ಅಲಿಮ್ ಪಾಷಾ, ಉಪಕುಲಸಚಿವರಾದ ಡಾ. ಅಜರುದ್ದೀನ್ ಹಾಗೂ ಡಾ. ಪಂಡಿತ್, ಸಹಾಯಕ ಕುಲಸಚಿವ ಸುನಿಲ್ ಕೆ. ಸೇರಿದಂತೆ ಹಲವರು ಉಪಸ್ಥಿತರಿದ್ದರು.