ಕಲಬುರಗಿ | ಮಾನಸಿಕ, ಶಾರೀರಿಕ ಸದೃಢತೆಗೆ ಕ್ರೀಡೆ ಸಹಕಾರಿ : ಝಹೀರಾ ನಸೀಮ್
ಆರ್.ಡಿ.ಪಿ.ಆರ್. ಕ್ರೀಡಾಕೂಟಕ್ಕೆ ಚಾಲನೆ
ಕಲಬುರಗಿ: ಮಾನಸಿಕ ಮತ್ತು ಶಾರೀರಿಕ ಸದೃಢತೆಗೆ ಕ್ರೀಡೆ ಸಹಕಾರಿಯಾಗಿದೆ. ದೈನಂದಿನ ಕಚೇರಿ ಕೆಲಸದ ಒತ್ತಡದ ನಡುವೆಯೂ ತಮ್ಮ ಆರೋಗ್ಯದ ಕಡೆಯೂ ನೌಕರರು ಹೆಚ್ಚು ಕಾಳಜಿ ವಹಿಸಬೇಕು ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಝಹೀರಾ ನಸೀಮ್ ಹೇಳಿದರು.
ಗುರುವಾರ ಇಲ್ಲಿನ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ಆರ್.ಡಿ.ಪಿ.ಆರ್ ಅಧಿಕಾರಿ-ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಆರ್.ಡಿ.ಪಿ.ಆರ್-2026 ಕ್ರೀಡಾಕೂಟವನ್ನು ಆಕಾಶದಲ್ಲಿ ಬಲೂನ್ ಹಾರಿಬಿಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯವಲ್ಲ. ಕ್ರೀಡಾ ಮನೋಭಾವನೆಯಿಂದ ಸ್ಪರ್ಧಿಸುವುದು ಅವಶ್ಯಕ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸಂಘಟನೆ, ನಾಯಕತ್ವದ ಗುಣ ಸಿಗಲಿದೆ. ಇದು ದೈನಂದಿನ ಕಚೇರಿ ಕೆಲಸಕ್ಕೂ ನೆರವಿಗೆ ಬರಲಿದೆ. ಒತ್ತಡದ ಜೀವನಕ್ಕೆ ಕ್ರೀಡೆ, ಸಂಗೀತ ಮದ್ದಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಇನ್ನು ದಿನದ ಆಟ ಮುಕ್ತಾಯದ ನಂತರ ಸಂಜೆ ನಡೆದ ಪದಕ ವಿತರಣೆ ಸಮಾರಂಭದಲ್ಲಿ ಎಸ್.ಪಿ. ಅಡ್ಡೂರು ಶ್ರಿನಿವಾಸಲು ಅವರು ವಿಜೇತ ಕ್ರೀಡಾಪಟುಗಳಿಗೆ ಪದಕ, ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಣ್ಮಣ ಶೃಂಗೇರಿ, ಸಿ.ಪಿ.ಓ ಎಸ್.ಎಸ್.ಮಠಪತಿ, ಯೋಜನಾ ನಿರ್ದೇಶಕ ಜಗದೇವ, ಮುಖ್ಯ ಲೆಕ್ಕಾಧಿಕಾರಿ ವಿಕಾಸ ಸಜ್ಜನ್, ಬಾಸ್ಕೆಟ್ ಬಾಲ್ ತರಬೇತುದಾರ ಪ್ರವೀಣ್ ಪುಣೆ, ಸಂಜಯ್ ಬಾಣದ ಸೇರಿದಂತೆ ಆರ್.ಡಿ.ಪಿ.ಆರ್ ಇಲಾಖೆಯ ವಿವಿಧ ವೃಂದದ ಪಧಾಧಿಕಾರಿಗಳು, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.