×
Ad

ಕಲಬುರಗಿ | ಟೌನ್ ಹಾಲ್ ನವೀಕರಣದಿಂದ ಐತಿಹಾಸಿಕ ಪರಂಪರೆಗೆ ಧಕ್ಕೆ : ಸಂಶೋಧಕರಿಂದ ಆಕ್ಷೇಪ

Update: 2026-01-22 23:09 IST

ಕಲಬುರಗಿ: ನಗರದ ಸಾರ್ವಜನಿಕ ಉದ್ಯಾನವನದಲ್ಲಿರುವ ಐತಿಹಾಸಿಕ ಟೌನ್ ಹಾಲ್ ಅನ್ನು ಸೂಕ್ತ ಮಾರ್ಗಸೂಚಿಗಳಿಲ್ಲದೆ ನವೀಕರಣಗೊಳಿಸುವ ಮೂಲಕ ಅದರ ಐತಿಹಾಸಿಕ ಪರಂಪರೆ ಹಾಗೂ ಮೂಲ ವಾಸ್ತುಶಿಲ್ಪಕ್ಕೆ ಗಂಭೀರ ಹಾನಿ ಉಂಟುಮಾಡಲಾಗಿದೆ ಎಂದು ಕಲಾವಿದ ಹಾಗೂ ಸಂಶೋಧಕ ರೆಹಮಾನ್ ಪಟೇಲ್ ಮತ್ತು ದಕ್ಕನ್ ಇತಿಹಾಸ ತಜ್ಞ ಹಾಗೂ ಛಾಯಾಗ್ರಾಹಕ ಮೊಹಮ್ಮದ್ ಅಯಾಜೋದ್ದೀನ್ ಪಟೇಲ್ ಆರೋಪಿಸಿದ್ದಾರೆ.

ಟೌನ್ ಹಾಲ್ ಅನ್ನು ಹೈದರಾಬಾದ್‌ನ ಕೊನೆಯ ನಿಜಾಮರಾದ ಸರ್ ಮಿರ್ ಓಸ್ಮಾನ್ ಅಲಿ ಖಾನ್ ಬಹಾದೂರ್ ಅವರು 1929ರಲ್ಲಿ ಸ್ಥಾಪಿಸಿದ್ದರು. ಇಂಡೋ–ಸಾರಸೆನಿಕ್ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿತವಾಗಿರುವ ಈ ಕಟ್ಟಡವು ವೈಭವಯುತ ಕಮಾನುಗಳು, ಗೋಪುರಗಳು ಹಾಗೂ ವಿಶಿಷ್ಟ ವಿನ್ಯಾಸದ ಮೂಲಕ ಹೈದರಾಬಾದ್ ರಾಜ್ಯದ ವಾಸ್ತು ಪರಂಪರೆಯನ್ನು ಪ್ರತಿಬಿಂಬಿಸುವ ಪ್ರಮುಖ ನಾಗರಿಕ ಸ್ಮಾರಕವಾಗಿತ್ತು ಎಂದು ಅವರು ಹೇಳಿದರು.

ಪ್ರಸ್ತುತ ಕಲಬುರಗಿ ಮಹಾನಗರ ಪಾಲಿಕೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಐತಿಹಾಸಿಕ ಕಟ್ಟಡವು ನಿರ್ಲಕ್ಷ್ಯದಿಂದ ತನ್ನ ಮೂಲ ಸೌಂದರ್ಯವನ್ನು ಬಹುತೇಕ ಕಳೆದುಕೊಂಡಿದೆ. ಇತ್ತೀಚೆಗೆ ಕೈಗೊಂಡ ನವೀಕರಣ ಕಾಮಗಾರಿಗಳಲ್ಲಿ ಕಟ್ಟಡದ ವೈಶಿಷ್ಟ್ಯವಾಗಿದ್ದ ಹೊರಭಾಗದ ಕಮಾನುಗಳನ್ನು ಗೋಡೆಗಳಿಂದ ಮುಚ್ಚಲಾಗಿದ್ದು, ಇದರಿಂದ ಅದರ ಐತಿಹಾಸಿಕ ಸ್ವರೂಪಕ್ಕೆ ಧಕ್ಕೆ ಉಂಟಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ನವೀಕರಣ ಕಾರ್ಯ ಆರಂಭಿಸುವ ಮೊದಲು ಪರಂಪರೆ ತಜ್ಞರು ಹಾಗೂ ವಾಸ್ತುಶಿಲ್ಪ ತಜ್ಞರ ಸಲಹೆ ಪಡೆಯಬೇಕಿತ್ತು. ಶತಮಾನ ಹಳೆಯ ಈ ಕಟ್ಟಡವು ಕಲಬುರಗಿಯಲ್ಲಿನ ಹೈದರಾಬಾದ್ ರಾಜ್ಯದ ವಾಸ್ತುಶಿಲ್ಪದ ಅಪರೂಪದ ಉದಾಹರಣೆಯಾಗಿದ್ದು, ಅದರ ಮೂಲ ಸ್ವರೂಪವನ್ನು ಸಂರಕ್ಷಿಸುವುದು ಅತ್ಯಾವಶ್ಯಕ ಎಂದು ಅಭಿಪ್ರಾಯಪಟ್ಟರು.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು, ಟೌನ್ ಹಾಲ್‌ನ ಐತಿಹಾಸಿಕ ಸೌಂದರ್ಯ ಹಾಗೂ ಪರಂಪರೆಯನ್ನು ಉಳಿಸುವ ದಿಕ್ಕಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕಲಾವಿದರು ಹಾಗೂ ಇತಿಹಾಸ ತಜ್ಞರು ಪಾಲಿಕೆಯನ್ನು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News