ಕಲಬುರಗಿ | ಪುಸ್ತಕ ಸಂತೆಯಲ್ಲಿ ಪಾಲ್ಗೊಳ್ಳಲು ಕಸಾಪ ಅಧ್ಯಕ್ಷರಿಂದ ಮನವಿ
ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗುತ್ತಿರುವ ರಾಜ್ಯ ಮಟ್ಟದ ಪುಸ್ತಕ ಸಂತೆಯಲ್ಲಿ ಈ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅದನ್ನು ಯಶಸ್ವಿಗೊಳಿಸಬೇಕೆಂದು ಆಳಂದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಣಮಂತ ಶೇರಿ ಖಜೂರಿ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜಧಾನಿ ಪ್ರದೇಶವನ್ನು ಹೊರತುಪಡಿಸಿ ಇದೇ ಮೊದಲ ಬಾರಿಗೆ ಹೊರ ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿರುವ ಪುಸ್ತಕ ಸಂತೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ ಎಂದು ಹೇಳಿದರು. ಜ.24, 25 ಹಾಗೂ 26ರಂದು ಬೀದರ್ ನಗರದ ಸಾಯಿ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಈ ಪುಸ್ತಕ ಸಂತೆಯಲ್ಲಿ ರಾಜ್ಯದ ಪ್ರಮುಖ 50 ಪ್ರಕಾಶಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ತಂತ್ರಜ್ಞಾನ ಯುಗದಲ್ಲಿ ಯುವಜನರನ್ನು ಮತ್ತೆ ಪುಸ್ತಕಗಳ ಲೋಕದತ್ತ ಆಕರ್ಷಿಸುವ ಉದ್ದೇಶದಿಂದ ವೀರಲೋಕ ಬುಕ್ಸ್ ಸಂಸ್ಥೆಯು ಭಾಲ್ಕಿ ಹಿರೇಮಠ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಮೂರು ದಿನಗಳ ಕಾಲ ರಾಜ್ಯ ಮಟ್ಟದ ಪುಸ್ತಕ ಸಂತೆಯನ್ನು ಆಯೋಜಿಸಿದೆ. ಕಳೆದ ಮೂರು ವರ್ಷಗಳಿಂದ ಈ ಸಂಸ್ಥೆಯು ಪುಸ್ತಕ ಸಂತೆಗಳನ್ನು ಆಯೋಜಿಸುತ್ತಿದ್ದು, ಹಿಂದಿನ ಮೂರು ಸಂತೆಗಳು ಬೆಂಗಳೂರಿನಲ್ಲಿ ನಡೆದಿದ್ದವು. ಅವುಗಳಲ್ಲಿ ಲಕ್ಷಾಂತರ ಜನರು ಭಾಗವಹಿಸಿ ಲಾಭ ಪಡೆದಿದ್ದಾರೆ ಎಂದು ಹೇಳಿದರು.
ಈ ಬಾರಿ ಪುಸ್ತಕ ಸಂತೆಯನ್ನು ರಾಜಧಾನಿಗೆ ಮಾತ್ರ ಸೀಮಿತಗೊಳಿಸದೆ, ಹೊರ ಜಿಲ್ಲೆಗಳತ್ತ ವಿಸ್ತರಿಸುವ ಉದ್ದೇಶದಿಂದ ಗಡಿನಾಡು ಬೀದರ್‌ನಲ್ಲಿ ನಾಲ್ಕನೇ ಪುಸ್ತಕ ಸಂತೆಯನ್ನು ಆಯೋಜಿಸಲಾಗಿದೆ. ಸಂತೆಯಲ್ಲಿ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟಕ್ಕಾಗಿ 40 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಈಗಾಗಲೇ 40 ಪ್ರಕಾಶಕ ಸಂಸ್ಥೆಗಳು ನೋಂದಣಿ ಮಾಡಿಕೊಂಡಿವೆ.
ಪುಸ್ತಕ ಸಂತೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಹಿರಿಯ ಹಾಗೂ ಖ್ಯಾತ ಸಾಹಿತಿಗಳು, 80ಕ್ಕೂ ಅಧಿಕ ಲೇಖಕರು ಮತ್ತು ರಾಜ್ಯ ಮಟ್ಟದ ಪತ್ರಿಕೆಗಳ ಸಂಪಾದಕರು ಭಾಗವಹಿಸಲಿದ್ದಾರೆ. ಜೊತೆಗೆ ಚಿತ್ರ ನಟರಾದ ನೆನಪಿರಲಿ ಪ್ರೇಮ, ಶ್ರೀನಗರ ಕಿಟ್ಟಿ ಹಾಗೂ ನಟಿ ಶೃತಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಪುಸ್ತಕ ಸಂತೆಗೆ ಚಾಲನೆ ನೀಡಲಿದ್ದು, ಪ್ರತಿ ದಿನ ಎಂಟು ವಿವಿಧ ಗೋಷ್ಠಿಗಳು ಹಾಗೂ ಸಂಜೆ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಹಿತಿ ಎಸ್.ಜಿ. ಸಿದ್ರಾಮಯ್ಯ ಅವರು ಭಾಷಣ ಮಾಡಲಿದ್ದಾರೆ ಎಂದು ಹಣಮಂತ ಶೇರಿ ಖಜೂರಿ ಹೇಳಿದರು.