×
Ad

ಅಫಜಲಪುರ | ಸಮಾಜಕ್ಕೆ ಸತ್ಯದ ಸಂದೇಶ ನೀಡಿದ ಅಂಬಿಗರ ಚೌಡಯ್ಯ : ಸಂಜೀವಕುಮಾರ ದಾಸರ

Update: 2026-01-22 23:06 IST

ಅಫಜಲಪುರ: ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಸಮಕಾಲೀನರಾಗಿದ್ದ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರು ಶರಣರ ಸಂಕುಲದಲ್ಲೇ ವಿಭಿನ್ನ ವ್ಯಕ್ತಿತ್ವ ಹೊಂದಿದ ತತ್ವನಿಷ್ಠ ಶ್ರೇಷ್ಠ ತತ್ವಜ್ಞಾನಿ ಹಾಗೂ ವಚನಕಾರರಾಗಿದ್ದರು ಎಂದು ತಹಶೀಲ್ದಾರ್ ಸಂಜೀವಕುಮಾರ ದಾಸರ ಹೇಳಿದರು.

ಪಟ್ಟಣದ ಗುರುಭವನದಲ್ಲಿ ತಾಲೂಕು ಆಡಳಿತ ಹಾಗೂ ಜಯಂತೋತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ 906ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಕಂಡದ್ದನ್ನು ಕಂಡಂತೆ, ಇದ್ದದ್ದನ್ನು ಇದ್ದ ಹಾಗೆ ಹೇಳುವ ಧೈರ್ಯ ನಿಜಶರಣ ಅಂಬಿಗರ ಚೌಡಯ್ಯನವರಿಗೆ ಇದ್ದಿತು. ಸಮಾಜಕ್ಕೆ ಸತ್ಯದ ಸಂದೇಶ ನೀಡಿದ ಕಾರಣಕ್ಕೇ ಅವರಿಗೆ “ನಿಜಶರಣ” ಎಂಬ ಬಿರುದು ಲಭಿಸಿದೆ ಎಂದು ತಿಳಿಸಿದರು.

ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಮಹಾರಾಯ ಅಗಸಿ ಮಾತನಾಡಿ, ಶರಣರು ಮಾತು ಮತ್ತು ಕೃತಿಗಳಲ್ಲಿ ಏಕರೂಪತೆ ಹೊಂದಿದ ಸಜ್ಜನ ವ್ಯಕ್ತಿತ್ವಗಳಾಗಿದ್ದರು. ದಿವಂಗತ ವಿಠ್ಠಲ್ ಹೇರೂರ ಅವರೊಂದಿಗೆ ಸಮಾಜಮುಖಿ ಹೋರಾಟಗಳಲ್ಲಿ ನಿರಂತರವಾಗಿ ಮುಂಚೂಣಿಯಲ್ಲಿ ಭಾಗವಹಿಸಿದ್ದಾಗಿ ಹೇಳಿದರು.

ತಾಲೂಕು ಕೋಲಿ ಸಮಾಜದ ಮಾಜಿ ಅಧ್ಯಕ್ಷ ಶಂಕರ ಮ್ಯಾಕೇರಿ ಮಾತನಾಡಿ, ಚೌಡಯ್ಯ ಶರಣರು ಕಂಡದ್ದನ್ನು ಕಂಡಂತೆ, ಇದ್ದದ್ದನ್ನು ಇದ್ದ ಹಾಗೆ ಹೇಳುತ್ತಿದ್ದವರು. ಆದರೆ ಇಂದಿನ ಸಮಾಜದಲ್ಲಿ ಹೇಳುವುದೊಂದು, ಮಾಡುವುದೊಂದು ಎಂಬ ಸ್ಥಿತಿ ಇರುವುದರಿಂದ ಸಮಾಜ ಬದಲಾವಣೆ ಕಷ್ಟಕರವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ದಿವಂಗತ ವಿಠ್ಠಲ್ ಹೇರೂರರಲ್ಲಿ ಚೌಡಯ್ಯನವರ ವಿಚಾರಧಾರೆ ಗಟ್ಟಿಯಾಗಿದ್ದು, ಅವರ ಸಮಾಜಕ್ಕೆ ನೀಡಿದ ಅಪಾರ ಕೊಡುಗೆ ಸದಾ ಸ್ಮರಣೀಯವಾಗಿದೆ ಎಂದರು.

ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಕಾರ್ಯದರ್ಶಿ ಶಿವಕುಮಾರ ನಾಟಿಕಾರ, ಬಿಜೆಪಿ ತಾಲೂಕು ಅಧ್ಯಕ್ಷ ವಿದ್ಯಾಧರ ಮಂಗಳೂರೆ, ಶ್ರೀಮಂತ ಬಿರಾದಾರ, ಬಸವರಾಜ ಚಾಂದಕವಟೆ, ಪ್ರಭಾವತಿ ಮೇತ್ರಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ್ ಜಮಾದಾರ, ಕೋಲಿ ಮುಖಂಡ ಬಸವರಾಜ ಸಪ್ಪನಗೋಳ ಸೇರಿದಂತೆ ಹಲವರು ಮಾತನಾಡಿದರು.

ಈ ಸಂದರ್ಭದಲ್ಲಿ ಮಹಾಂತೇಶ ಬಳೂಂಡಗಿ, ಮಲ್ಲಿಕಾರ್ಜುನ ಸಿಂಗೆ, ಮಹಾಂತೇಶ ತಳವಾರ, ಶ್ರೀಕಾಂತ ದಿವಾಣಜಿ, ರವಿ ಗೌರ, ಬಸವರಾಜ ನಿಂಬರ್ಗಿ, ಅಶೋಕ ದುದ್ದಗಿ, ನಾಗೇಶ ಬಿಲ್ವಾಡ, ಮಾರುತಿ ಮೂರನೆತ್ತಿ, ಉದಯಭಟ್ಟ ಪೂಜಾರಿ, ತಹಶೀಲ್ದಾರ್ ಸಂಜೀವಕುಮಾರ ದಾಸರ, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಜೆ.ಎಂ. ಕೊರಬು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News