ಕಲಬುರಗಿ | ಗಾಲ್ಫರ್ ಪ್ರಶಸ್ತಿ ಮುಡಿಗೇರಿಸಿದ ಕೇದಾರನಾಥ ಮುದ್ದಾ
ಕಲಬುರಗಿ : ಬೆಂಗಳೂರಿನ ಗಾಲ್ಫ್ ಕ್ಲಬ್ ಪ್ರತಿವರ್ಷ ಏರ್ಪಡಿಸುವ ವಿವಿಧ ಸ್ಪರ್ಧೆಗಳ ಹ್ಯಾಂಡಿ ಕ್ಯಾಪ್ ವಿಭಾಗದಲ್ಲಿ 2024-25 ನೇ ಸಾಲಿನ ಅತ್ಯುತ್ತಮ ಗಾಲ್ಫರ್ ಪ್ರಶಸ್ತಿಯನ್ನು ಕಲಬುರಗಿಯ ಕೇದಾರನಾಥ ಮುದ್ದಾ ಮುಡಿಗೇರಿಸಿಕೊಂಡಿದ್ದಾರೆ ಎಂದು ಪಂದ್ಯದ ಚೇರ್ಮನ್ ಉತ್ಪಲ್ ದೇಸಾಯಿ ತಿಳಿಸಿದ್ದಾರೆ.
ಶ್ರೀ ಶರಣಬಸವೇಶ್ವರ ಕಾಲೇಜಿನ ನಿವೃತ್ತ ಹಿಂದಿ ಪ್ರಾಧ್ಯಾಪಕರಾದ ದಿ.ವೀರಭದ್ರಪ್ಪ ಮುದ್ದ ಅವರ ಸುಪುತ್ರರಾಗಿರುವ ಹಾಗೂ ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ದಾಗ ಸರಕಾರದ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದ ಕೇದಾರನಾಥ ಮುದ್ದಾ ಕಳೆದ ಹಲವಾರು ವರ್ಷಗಳಿಂದ ಗಾಲ್ಫ್ ಕ್ರೀಡಾಪಟುವಾಗಿ ಅನುಭವ ಹೊಂದಿದ್ದು, ಇತ್ತೀಚೆಗೆ ನಡೆದ ಪಂದ್ಯದಲ್ಲಿ ಗಾಲ್ಫರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಸ್ಪರ್ಧೆಯು ಮುಕ್ತ ವಿಭಾಗ, ಹ್ಯಾಂಡಿ ಕ್ಯಾಪ್ ವಿಭಾಗ, ಮಹಿಳಾ ವಿಭಾಗ ಹಾಗೂ ಹಿರಿಯ ನಾಗರಿಕ (65 ವರ್ಷಕ್ಕಿಂತ ಮೇಲ್ಪಟ್ಟವರು) ವಿಭಾಗದಲ್ಲಿ ವಾರ್ಷಿಕ ಪ್ರಶಸ್ತಿ ನೀಡಲಾಗುತ್ತಿದ್ದು, ಜೂ.28ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುದ್ದ ಅವರಿಗೆ ಗಾಲ್ಫರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಎಂದು ಗೌರವ ಕಾರ್ಯದರ್ಶಿ ಎಸ್.ಕೆ.ರಘುನಂದನ್ ತಿಳಿಸಿದರು.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾಜಿ ಸಂಸದರಾದ ಡಾ.ಉಮೇಶ್ ಜಾಧವ್ ಭಾಗವಹಿಸಿ ಶುಭ ಕೋರಿದರು ಹಾಗೂ ಮುದ್ದಾ ಅವರ ಈ ಪ್ರಶಸ್ತಿ ಕಲಬುರಗಿಗೆ ಸಂದ ಗೌರವ ಎಂದು ಹೇಳಿದರು.