×
Ad

ಕಲಬುರಗಿ | ಇ-ಚಲನ್ ವ್ಯವಸ್ಥೆಗೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ

Update: 2025-01-25 18:26 IST

ಕಲಬುರಗಿ : ನಗರದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ಸವಾರರಿಗೆ ದಂಡ ವಿಧಿಸುವ ಇ-ಚಲನ್ ವ್ಯವಸ್ಥೆಗೆ ಇಂದಿಲ್ಲಿ ಚಾಲನೆ ನೀಡಿದ್ದು, ಸಂಚಾರ ನಿರ್ವಹಣೆ ಮತ್ತು ಸುಗಮ ದೃಷ್ಟಿಯಿಂದ ಕಲಬುರಗಿ ನಗರ ಪೊಲೀಸ್ ಉತ್ತಮ ಹೆಜ್ಜೆ ಇಟ್ಟಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದ ಪೊಲೀಸ್ ಭವನದಲ್ಲಿ ಶನಿವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಇಂಟಲಿಜೆನ್ಸ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಐ.ಟಿ.ಎಂ.ಎಸ್) ವ್ಯವಸ್ಥೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ನೂತನ ವ್ಯವಸ್ಥೆ ಜಾರಿಯಿಂದ ಕಲಬುರಗಿ ನಗರ ವ್ಯಾಪ್ತಿಯಲ್ಕಿ ಎಲ್ಲಿಯೇ ರ್ಯಾಶ್ ರೈಡಿಂಗ್, ತ್ರಿಬಲ್ ರೈಡಿಂಗ್, ರಾಂಗ್ ರೂಟ್, ಇಲ್ಲಿಗಲ್ ಪಾರ್ಕಿಂಗ್ ಸೇರಿದಂತೆ ಯಾವುದೇ ಸಂಚಾರ ನಿಯಮ ಉಲ್ಲಂಘಿಸಿದಲ್ಲಿ ವಾಹನ ಮಾಲಕರ ಹೆಸರಿಗೆ ಕ್ಷಣದಲ್ಲಿಯೇ ಐಟಿಎಂಎಸ್ ವ್ಯವಸ್ಥೆಯಿಂದ ಮಾಲಕರ ಮೊಬೈಲ್ ಗೆ ದಂಡದ ಮೊತ್ತ ತಿಳಿಸಲಾಗುತ್ತದೆ. ಅದರಂತೆ ಮಾಲಕರು ಆನ್ ಲೈನ್ ಮೂಲಕವೇ ದಂಡ ಪಾವತಿಸಬಹುದಾಗಿದೆ. ಇದರಿಂದ ದಂಡ ವಸೂಲಿಯಲ್ಲಿ ಪಾರದರ್ಶಕತೆ ಸಹ ಬರಲಿದೆ ಎಂದರು.

ಇದಕ್ಕಾಗಿ ಕಲಬುರಗಿ ನಗರದಾದ್ಯಂತ ಪೊಲೀಸ್ ಇಲಾಖೆಯಿಂದ 113 ಕಡೆ ಸಿಸಿಟಿವಿ ಹಾಕಿದ್ದು, ಪೊಲೀಸ್ ಭವನದಲ್ಲಿ ಇದನ್ನು ನಿಯಂತ್ರಿಸಲಾಗುತ್ತಿದೆ. ಸಾರ್ವಜನಿಕರು ಸಹ ಯಾವುದೇ ಸಂಚಾರ ಉಲ್ಲಂಘನೆ ಕಂಡುಬಂದಲ್ಲಿ 9480805500 ವಾಟ್ಸ್ಯಾಪ್ ಮೂಲಕ ದೂರು ಸಲ್ಲಿಸಿದಲ್ಲಿ ಪೊಲೀಸ್ ಇಲಾಖೆ ಕ್ರಮ ವಹಿಸುತ್ತದೆ ಎಂದ ಅವರು, ಕಳೆದ ಒಂದು ವಾರದಲ್ಲಿಯೇ ಪ್ರಾಯೋಗಿಕವಾಗಿ ಸಂಚಾರಿ ನಿಯಮ ಉಲ್ಲಂಘನೆಯ 483 ಕೇಸ್ ದಾಖಲಾಗಿದೆ ಎಂದರು.

ಇನ್ನು ಕಲಬುರಗಿ ನಗರದಲ್ಲಿ ಸುಗಮ ಸಂಚಾರ ನಿರ್ವಹಣೆಗೆ ಮತ್ತು ಸಂಚಾರಿ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರತಿಷ್ಠಿತ ಸಂಸ್ಥೆಯಿಂದ ಅಧ್ಯಯನ ಮಾಡಿ ವರದಿ ನೀಡಲು ತಿಳಿಸಿದ್ದು, ಇದಕ್ಕಾಗಿ 5 ಕೋಟಿ ರೂ. ಮೀಸಲಿಟ್ಟು ಪ್ರಸಕ್ತ 2024-25ನೇ ಸಾಲಿಗೆ ಜಿಲ್ಲೆಗೆ 2.50 ಕೋಟಿ ರೂ. ಬಿಡುಗಡೆ ಮಾಡಿದೆ ಎಂದರು.

ಫ್ಲೈ ಓವರ್ ರಸ್ತೆ ನಿರ್ಮಾಣ ಅಧ್ಯಯನಕ್ಕೆ ಸೂಚನೆ :

ಕಲಬುರಗಿ ನಗರದ ಖರ್ಗೆ ಪೆಟ್ರೋಲ್ ಪಂಪ್, ರಾಮ ಮಂದಿರ, ಹಾಗರಗಾ ಕ್ರಾಸ್ ಬಳಿ ಫ್ಲೈ ಓವರ್ ಮೇಲ್ಸೇತುವೆ ನಿರ್ಮಾಣಕ್ಕೆ ಅಧ್ಯಯನ ನಡೆಸಿ ವರದಿ ನೀಡಲು ಸಂಸ್ಥೆಯೊಂದಕ್ಕೆ ಸೂಚಿಸಿದ್ದು, ವರದಿ ಬಂದ ನಂತರ ಕ್ರಮ ವಹಿಸಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಸಚಿವ ಪ್ರಿಯಾಂಕ್ ಕರ್ಗೆ ಉತ್ತರಿಸಿದರು.

ಮಾದಕ ದ್ರವ್ಯ ವಿರೋಧಿ ಅಭಿಯಾನ :

ಜಿಲ್ಲೆಯಲ್ಲಿ ಡ್ರಗ್ಸ್ ಹಾವಳಿ ನಿಯಂತ್ರಣಕ್ಕೆ ಕೆಲವು ಕಠಿಣ ನಿರ್ಧಾರ ಕೈಗೊಂಡ ಪರಿಣಾಮ ತಕ್ಕ ಮಟ್ಟಿಗೆ ನಿಯಂತ್ರಣವಾಗಿದ್ದರೂ ಪೂರ್ಣವಾಗಿ ಮಟ್ಟ ಹಾಕಲು ಆಗಿಲ್ಲ. 2023 ರಲ್ಲಿ 51, 2024ರಲ್ಲಿ 53 ಹಾಗೂ 2025ರಲ್ಲಿ ಒಂದು ತಿಂಗಳೊಳಗೆ 108 ಪ್ರಕರಣ ದಾಖಲಿಸಿ 2 ಲಕ್ಷ ರೂ. ಮೌಲ್ಯದ ಗಾಂಜಾ ಸೇರಿದಂತೆ ನಗದು ಹಣ, ಕಾರ್, ಆಟೋ, ಸೈಕಲ್ ವಶಕ್ಕೆ ಪಡೆಯಲಾಗಿದೆ. ಇದನ್ನು ಬೇರು ಸಮೇತ ಕಿತ್ತು ಹಾಕುವ ನಿಟ್ಟಿನಲ್ಲಿ ಬಜೆಟ್ ನಂತರ ಎಂಟಿ ಡ್ರಗ್ ಅಭಿಯಾನ ಆರಂಭಿಸಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್, ಕಲಬುರಗಿ ಉತ್ತರ ಶಾಸಕಿ ಮತ್ತು ಕರ್ನಾಟಕ ರೇಷ್ಮೆ ಅಭಿವೃದ್ಧಿ ನಿಯಮಿತದ ಅಧ್ಯಕ್ಷೆ ಕನೀಜ್ ಫಾತಿಮಾ, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಮಹಾನಗರ ಪಾಲಿಕೆ ಮೇಯರ್ ಯಲ್ಲಪ್ಪ ನಾಯ್ಕೋಡಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಡಿ.ಸಿ.ಪಿ ಕನಿಕಾ ಸಿಕ್ರಿವಾಲ್, ಹೆಚ್ಚುವರಿ ಎಸ್.ಪಿ. ಮಹೇಶ ಮೇಘಣ್ಣನವರ್ ಸೇರಿದಂತೆ ಪೊಲೀಸ್ ಅಧಿಕಾರಿಗಳಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News