ಕಲಬುರಗಿ | ನ್ಯಾ.ನಾಗಮೋಹನ್ ದಾಸ್ ವರದಿ ಜಾರಿಗೆ ವಿಳಂಬ ಖಂಡಿಸಿ ಪ್ರತಿಭಟನೆ
ಕಲಬುರಗಿ: ಒಳಮೀಸಲಾತಿಗೆ ಜಾರಿಗೆಗೆ ನೇಮಿಸಿದ್ದ ನ್ಯಾ.ನಾಗಮೋಹನ್ ದಾಸ್ ವರದಿಯನ್ನು ಅನುಷ್ಠಾನಕ್ಕೆ ವಿಳಂಬ ಖಂಡಿಸಿ ಮಾದಿಗ ಜಾತಿ, ಉಪಜಾತಿ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಎಸ್‍ವಿಪಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮಾದಿಗ ಸಮಾಜ ಮುಖಂಡರು ಬಿಜೆಪಿ ಎಸ್‍ಸಿ ಮೋರ್ಚಾ ನಗರ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಜಿನಕೇರಿ ಅವರ ನೇತೃತ್ವದಲ್ಲಿ ' ತಮಟೆ ಚಳುವಳಿ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ ಸಮುದಾಯದೊಳಗಿನ ಅತೀ ಹಿಂದುಳಿದ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಸಲುವಾಗಿ ಜಾರಿಯಾಗಬೇಕಾಗಿರುವ ಒಳಮೀಸಲಾತಿಯ ಬೇಡಿಕೆ ಮತ್ತು ಹೋರಾಟ 35 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಈ ಅಸಮಾನತೆಯನ್ನು ಸರಿಪಡಿಸಲು 2024ರ ಆಗಸ್ಟ್ 1ರಂದು ಸರ್ವೋಚ್ಚ ನ್ಯಾಯಾಲಯದ ತೀರ್ಪು ಸ್ಪಷ್ಟವಾಗಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳಿಗೂ ಜನಸಂಖ್ಯೆ ಅನುಗುಣವಾಗಿ ಒಳಮೀಸಲಾತಿ ನೀಡಲು ಆಯಾ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆ. ಆದರೂ ರಾಜ್ಯದಲ್ಲಿ ಜಾರಿಗೆ ನಿರ್ಲಕ್ಷ್ಯ ತೋರುತ್ತಿರುವುದು ಸರಿಯಲ್ಲ ಎಂದು ಪ್ರತಿಭಟನಾಕರರು ಆಕ್ರೋಶ ವ್ಯಕ್ತಪಡಿಸಿದರು.
ಈ ವಿಳಂಬ ನೀತಿಯಿಂದ ಮಾದಿಗ ಸಮುದಾಯದ ವಿದ್ಯಾರ್ಥಿಗಳು, ಉದ್ಯಾಗಾಕಾಂಕ್ಷಿಗಳು, ಕಾರ್ಮಿಕರು ಹಾಗೂ ಮಹಿಳೆಯರು ಒಟ್ಟಾರೆ ಸಮಾಜ ತಮ್ಮ ನ್ಯಾಯಯುತ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಹಾಗಾಗಿ ಎಲ್ಲರ ಅಭ್ಯುದಯಕ್ಕಾಗಿ ಕೂಡಲೇ ವರದಿ ಅನುಷ್ಟಾನಕ್ಕೆ ತರಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜು ವಾಡೇಕರ್, ಪರಮೇಶ್ವರ ಖಾನಾಪೂರ, ಗೋಪಾಲರಾವ ಕಟ್ಟಿಮನಿ, ದಶರಥ ಕಲಗುರ್ತಿ, ರಾಜು ಮುಕ್ಕಣ್ಣ, ರಾಜು ಕಟ್ಟಿಮನಿ, ಮಂಜುನಾಥ ನಾಲವರಕರ್, ಮನೋಹರ ಬೀರನೂರ, ಬಂಡೇಶ ರತ್ನಡಗಿ, ಪ್ರದೀಪ ಬಾಚನಾಳಕರ್, ದೇವರಾಜ ಕೊಳ್ಳೂರ, ಪ್ರಕಾಶ ಮಾಳಗೆ, ಗೋಪಾಲ ನಾಟೀಕರ್, ದತ್ತು ಭಾಸಗಿ, ಅಮೃತ, ಕಾಶಿನಾಥ, ಶ್ರೀಮಂತ ಸೇರಿದಂತೆ ಉಪಸ್ಥಿತರಿದ್ದರು.