×
Ad

ಕಲಬುರಗಿ | ಅಂಬಿಗರ ಚೌಡಯ್ಯ ಮೂರ್ತಿಗೆ ಹಾನಿಗೊಳಿಸಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ

Update: 2025-10-11 16:56 IST

ಕಲಬುರಗಿ: ಚಿತ್ತಾಪುರ ಮತಕ್ಷೇತ್ರದ ಶಹಾಬಾದ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ಗುರುವಾರ ರಾತ್ರಿ ಕೋಲಿ, ಕಬ್ಬಲಿಗ ಸಮಾಜದ ಕುಲಗುರು ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಮೂರ್ತಿ ಹಾನಿಗೊಳಿಸಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿ ತಾಲೂಕು ಕೋಲಿ ಸಮಾಜದ ನೇತೃತ್ವದಲ್ಲಿ ಚಿತ್ತಾಪುರ ಪಟ್ಟಣದ ಲಾಡ್ಜಿಂಗ್ ಕ್ರಾಸ್ ಹತ್ತಿರ ಮಾನವ ಸರಪಳಿ ಮತ್ತು ರಸ್ತೆ ತಡೆ ಪ್ರತಿಭಟನೆ ನಡೆಯಿತು.

ನಂತರ ಕೋಲಿ ಸಮಾಜದ ಹಿರಿಯ ಮುಖಂಡ ಹಾಗೂ ಪಿಎಲ್‌'ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, ಮುತ್ತಗಾ ಗ್ರಾಮದಲ್ಲಿ ಸ್ಥಾಪಿಸಿದ್ದ ಕೋಲಿ, ಕಬ್ಬಲಿಗ ಸಮಾಜದ ಕುಲಗುರು ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಕಿಡಿಗೇಡಿಗಳು ಹಾನಿಗೊಳಿಸಿರುವ ದುಷ್ಕೃತ್ಯವನ್ನು ಚಿತ್ತಾಪುರ ತಾಲೂಕು ಕೋಲಿ ಸಮಾಜವು ತೀವ್ರವಾಗಿ ಖಂಡಿಸುತ್ತದೆ. ಬಸವಾದಿ ಶಿವಶರಣರಲ್ಲಿಯೆ ನಿಜಶರಣ ಎಂಬ ಖ್ಯಾತಿ ತಮ್ಮದಾಗಿಸಿಕೊಂಡಿರುವ ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನ ಹಾಗೂ ಅವಮಾನ ಘಟನೆಯು ಇಡೀ ಕೋಲಿ, ಕಬ್ಬಲಿಗ ಸಮಾಜದ ಸ್ವಾಭಿಮಾನಕ್ಕೆ ಅಪಮಾನ ಮಾಡಿದೆ ಮತ್ತು ಸಮಾಜದ ಜನತೆಯ ಭಾವನೆಗಳಿಗೆ ತೀವ್ರ ಧಕ್ಕೆಯುಂಟಾಗಿದೆ ಎಂದು ಹೇಳಿದರು.

ಸಮಾಜದಲ್ಲಿ ಸಾರ್ವಜನಿಕ ಶಾಂತಿಗೆ, ಕೋಮು ಸಾಮರಸ್ಯಕ್ಕೆ ಧಕ್ಕೆಯುಂಟುಮಾಡುವ ಷಡ್ಯಂತರ ರೂಪಿಸಿ ಅಶಾಂತಿಯ ಮತ್ತು ಕೋಮು ಸಾಮರಸ್ಯ ಕದಡಿದ್ದನ್ನು ಮತ್ತು ಕೋಲಿ ಸಮಾಜದ ಜನತೆಯ ಭಾವನೆಗಳನ್ನು ಕೆರಳಿಸಿದ್ದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಗೌರವಾಧ್ಯಕ್ಷ ರಾಮಲಿಂಗ ಬಾನರ್‌ ಮಾತನಾಡಿ, ಆರೋಪಿ ಯಾವುದೇ ಜಾತಿ ಜನಾಂಗಕ್ಕೆ ಸೇರಿರಲಿ ತಾರತಮ್ಯ ಮಾಡದೇ ಮೂರ್ತಿ ಭಗ್ನಗೊಳಿಸಿದ ದುಷ್ಕರ್ಮಿಗಳನ್ನು ಮತ್ತು ಅಂತಹ ಕುಕೃತ್ಯ ಎಸಗಲು ಪರೋಕ್ಷವಾಗಿ ಪ್ರಚೋದನೆ ನೀಡಿರುವ ಸಮಾಜ ವಿರೋಧಿ ಶಕ್ತಿಗಳನ್ನು ಗುರುತಿಸಿ ಮತ್ತು ಶೀಘ್ರ ಪತ್ತೆ ಹಚ್ಚಿ ಕಾನೂನು ಪ್ರಕಾರ ಕ್ರಮ ಕೈಗೊಂಡು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಒಂದು ವೇಳೆ ಆರೋಪಿಗಳ ಪತ್ತೆ ಮತ್ತು ಬಂಧನಕ್ಕೆ ವಿಳಂಬ ಮಾಡಿದರೆ ಕೋಲಿ ಕಬ್ಬಲಿಗ ಸಮಾಜವು ತೀವ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ಹಿರಿಯ ಮುಖಂಡರಾದ ಬಸವರಾಜ ಚಿನ್ನಮಳ್ಳಿ, ಹಣಮಂತ ಸಂಕನೂರ, ಸುರೇಶ ಬೆನಕನಳ್ಳಿ, ತಾಲೂಕು ಯುವ ಅಧ್ಯಕ್ಷ ರಾಜೇಶ ಹೋಳಿಕಟ್ಟಿ, ಪ್ರಭು ಹಲಕರ್ಟಿ ಅವರು ಮಾತನಾಡಿದರು.

ತಾಲೂಕು ಅಧ್ಯಕ್ಷ ನಿಂಗಣ್ಣ ಹೆಗಲೇರಿ, ಹಿರಿಯ ಮುಖಂಡ ಮಲ್ಲಿಕಾರ್ಜುನ ಎಮ್ಮೆನೋರ್, ಪ್ರಧಾನ ಕಾರ್ಯದರ್ಶಿ ಕರಣಕುಮಾರ ಬೂನಿ ಅಲ್ಲೂರ್, ನಗರ ಯುವ ಅಧ್ಯಕ್ಷ ಬಸವರಾಜ ಮೈನಾಳಕರ್, ಮಹೇಶ್ ವಠಾರ, ಸೂರ್ಯಕಾಂತ ಕೊಂಕನಳ್ಳಿ, ನಾಗೇಂದ್ರ ಜೈಗಂಗಾ, ಈರಣ್ಣ ಈಸಬಾ, ದೊಡ್ಡಪ್ಪ ಕಟ್ಟಿಮನಿ, ಕರ್ಣಪ್ಪ ಈಸಬಾ, ಶರಣು ಸಿದ್ರಾಮಗೋಳ, ಬಸವರಾಜ ಜಕಾತಿ, ವೆಂಕಟರಮಣ ಬೇವಿನಗಿಡ, ಶರಣಪ್ಪ ಹೊನ್ನಪೂರ, ಶಿವಶರಣ ಮೇಂಗಾ, ಆಂಜನೇಯ ಜೀವಣಗಿ, ಮಲ್ಲೇಶಿ ಜೀರಕಲ್, ಭೀಮು ಸಾಲಿ ಸೇರಿದಂತೆ ಅನೇಕರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News