ಕಲಬುರಗಿ | ಎಸ್.ಎಲ್.ಭೈರಪ್ಪ ಅವರು ಮೇರು ಪರ್ವತದಂತಿದ್ದರು : ಡಾ.ಶ್ರೀನಿವಾಸ ಸಿರನೂರಕರ್
ಕಲಬುರಗಿ : ಸರಸ್ವತಿ ಸಮ್ಮಾನ ಪ್ರಶಸ್ತಿ ಪುರಸ್ಕೃತರಾದ ಡಾ.ಎಸ್.ಎಲ್.ಭೈರಪ್ಪ ಅವರು ಮೇರು ಪರ್ವತದಂತಿದ್ದರು ಎಂದು ಹಿರಿಯ ಸಾಹಿತಿ ಡಾ. ಶ್ರೀನಿವಾಸ ಸಿರನೂರಕರ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ನವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾದಂಬರಿ ಕ್ಷೇತ್ರದಲ್ಲಿ ಅನೇಕ ಖ್ಯಾತ ಕಾದಂಬರಿಗಳನ್ನು ಬರೆದು ಸಮಷ್ಟಿ ಪ್ರಜ್ಞೆ ತೋರಿಸಿಕೊಟ್ಟವರು. ಅವರ ವಂಶವೃಕ್ಷ , ದಾಟು, ತಬ್ಬಲಿ ನೀನಾದೆ ಮಗನೆ, ಪರ್ವ ಮುಂತಾದ ಜನಪ್ರಿಯ ಕಾದಂಬರಿಗಳನ್ನು ರಚಿಸಿದ್ದಾರೆ. ಅವರಲ್ಲಿದ್ದ ಸಾಹಿತ್ಯದ ವಿದ್ವತ್ತು ಕನ್ನಡ ಸಾರಸ್ವತ ಲೋಕ ಎಂದಿಗೂ ಮರೆಯುವುದಿಲ್ಲ. ಈ ನೆಲದ ಋಣಭಾರದ ಬಗ್ಗೆ ಹೊಂದಿದ ಪ್ರೀತಿ ಕಾಳಜಿ ಮರೆಯಲಾಗದು ಎಂದು ಅವರ ವ್ಯಕ್ತಿತ್ವವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಸಾಹಿತಿ ಡಾ. ಶ್ರೀಶೈಲ್ ನಾಗರಾಳ ಮಾತನಾಡಿ, ಡಾ.ಎಸ್.ಎಲ್.ಭೈರಪ್ಪ ನವರನ್ನು ಸಮೀಪದಿಂದ ನೋಡಲಾಗಿದೆ. ಅವರ ಸರಳತೆ, ಹೃದಯವಂತಿಕೆ, ಈ ನೆಲದ ಪ್ರೀತಿ ನಮಗೆ ಸ್ಫೂರ್ತಿಯಾಗಿವೆ. ಇಂದು ಭೌತಿಕವಾಗಿ ಇಲ್ಲದಿದ್ದರೂ ಅವರ ವಿಚಾರಗಳ ಕೃತಿಗಳು ನಮ್ಮ ಜೊತೆ ಸದಾ ಮಾತಾಡಿಸುತ್ತವೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ಕಾದಂಬರಿ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ಕೀರ್ತಿ ಎಸ್.ಎಲ್.ಭೈರಪ್ಪ ನವರಿಗೆ ಸಲ್ಲುತ್ತದೆ. ಸಾಹಿತ್ಯ, ಸಂಸ್ಕೃತಿ, ಧಾರ್ಮಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆ ಕನ್ನಡ ಸಾರಸ್ವತ ಲೋಕ ಬಡವಾಗಿದೆ. ಭೈರಪ್ಪ ನವರ ಸಾಹಿತ್ಯ ದರ್ಶನ ಹೊಸ ಪೀಳಿಗೆಗೆ ಮುಟ್ಟಿಸುವ ನಿಟ್ಟಿನಲ್ಲಿ ಪರಿಷತ್ತು ಮುಂದಿನ ದಿನಗಳಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸಲು ಆಲೋಚಿಸಿದೆ ಎಂದರು.
ಕೇಂದ್ರ ಕಸಾಪ ಪ್ರತಿನಿಧಿ ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಮಾಜಿ ಉಪ ಮಹಾಪೌರರಾದ ನಂದಕುಮಾರ ಮಾಲಿಪಾಟೀಲ, ಪರಿಷತ್ತಿನ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ, ಪ್ರಮುಖರಾದ ರವಿಕುಮಾರ ಶಹಾಪುರಕರ್, ಶಕುಂತಲಾ ಪಾಟೀಲ , ಜ್ಯೋತಿ ಕೋಟನೂರ, ಜಯಶ್ರೀ ಜಮಾದಾರ, ಸಮ್ರೀನ್ ಶೇಖ್, ಎಂ ಎನ್ ಸುಗಂಧಿ, ಶಿವಕುಮಾರ ಸಿಎಚ್., ಮಂಜುನಾಥ ಕಂಬಾಳಿಮಠ, ಪ್ರಭವ ಪಟ್ಟಣಕರ್, ರಮೇಶ ಡಿ ಬಡಿಗೇರ, ಧರ್ಮರಾಜ ಜವಳಿ, ರೇವಣಸಿದ್ದಪ್ಪ ಜೀವಣಗಿ, ರಾಜೇಂದ್ರ ಮಾಡಬೂಳ, ಬಾಬುರಾವ ಪಾಟೀಲ, ಡಾ. ರೆಹಮಾನ್ ಪಟೇಲ್, ರೇವಣಸಿದ್ದ ಸಿದ್ರಾಮಗೋಳ, ಚಂದ್ರಕಾoತ ಸೂರನ್, ಶಿವಾನಂದ ಸುರವಸೆ, ಸಂಗಣ್ಣ ಸೇರಿದಂತೆ ಅನೆಕರು ಭಾಗವಹಿಸಿದ್ದರು.