ಅಫಜಲಪುರ| ಅಂಬಿಗರ ಚೌಡಯ್ಯ ಮೂರ್ತಿಗೆ ಅವಮಾನ ಖಂಡಿಸಿ ಪ್ರತಿಭಟನೆ
ಕಲಬುರಗಿ: ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಶಹಾಬಾದ್ ತಾಲೂಕಿನ ಮುತಗಾ ಗ್ರಾಮದಲ್ಲಿ ನಡೆದ ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನ ಕೃತ್ಯವನ್ನು ಖಂಡಿಸಿ, ಅಫಜಲಪುರ ತಾಲೂಕ ಕೋಲಿ ಸಮಾಜ ಮತ್ತು ಇತರ ಸಮುದಾಯದ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು
ಅಫಜಲಪುರ ಪಟ್ಟಣದ ಅಂಬಿಗರ ಚೌಡಯ್ಯ ಪುತ್ಥಳಿ ಆವರಣದಲ್ಲಿ ತಾಲೂಕಿನ ಕೋಲಿ ಸಮಾಜ, ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳ ಕಾರ್ಯಕರ್ತರು ಮತ್ತು ಮುಸ್ಲಿಂ ಸಮುದಾಯದ ಮುಖಂಡರು ಲಿಂಗಾಯತ ಸಮುದಾಯ ಮುಖಂಡರು ಮತ್ತಿತರ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಸೇರಿ ಚೌಡಯ್ಯನವರ ಮೂರ್ತಿ ಭಗ್ನ ಮಾಡಿದ ಕಿಡಿಗೇಡಿಗಳಿಗೆ ಕಠಿಣವಾದ ಶಿಕ್ಷೆಗೆ ಗುರಿಪಡಿಸಬೇಕು, ಈ ಕೃತ್ಯ ಎಸಗಿದವರನ್ನು ಪ್ರಚೋದಿಸಿದ ಗುಂಪು ಯಾವುದು ಎಂಬುದನ್ನು ಕಂಡುಹಿಡಿದು ಅವರನ್ನು ಕೂಡ ಬಂಧಿಸಬೇಕು ಎಂದು ಆಗ್ರಹಿಸಲಾಯಿತು.
ಅಂಬಿಗರ ಚೌಡಯ್ಯನವರ ಪುತ್ಥ ಳಿಯಿಂದ ಬಸವೇಶ್ವರ ವೃತ್ತ ಮತ್ತು ಅಂಬೇಡ್ಕರ್ ವೃತ್ತದ ವರೆಗೆ ಮೆರವಣಿಗೆಯನ್ನು ನಡೆಸಲಾಯಿತು. ಮೆರವಣಿಗೆಯಲ್ಲಿ ಕೋಲಿ ಸಮಾಜದ ಧ್ವಜಗಳ ಜೊತೆಯಲ್ಲಿ ದಲಿತ ಸಂಘರ್ಷ ಸಮಿತಿಯ ನೀಲಿ ಧ್ವಜವನ್ನು ಹಿಡಿದು ಹಲವಾರು ಕಾರ್ಯಕರ್ತರು ಘೋಷಣೆ ಕೂಗುತ್ತಾ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದರು.
ಮುಖಂಡ ಲಚ್ಚಪ್ಪ ಜಮಾದಾರ್ ಮಾತನಾಡುತ್ತಾ, ಮೂರ್ತಿಯನ್ನು ಭಗ್ನಗೊಳಿಸಿದವರ ಹಿಂದಿರುವ ದುಷ್ಟ ಶಕ್ತಿಗಳನ್ನು ತಕ್ಷಣ ಬಂಧಿಸಬೇಕು, ಶರಣ ಅಂಬಿಗರ ಚೌಡಯ್ಯನವರು 12ನೇ ಶತಮಾನದ ಕ್ರಾಂತಿಕಾರಿ ಶರಣರಾಗಿದ್ದು, ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ, ಈ ರೀತಿಯ ಅವಮಾನ ಮಾಡುವ ಮೂಲಕ ಅವರ ವಿಚಾರಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹೇಳಿದರು.
ಹಿರಿಯ ಕಾಂಗ್ರೆಸ್ ಮುಖಂಡರಾದ ಜೆ.ಎಂ. ಕೊರಬು ಮಾತನಾಡಿ, ಅಂಬಿಗರ ಚೌಡಯ್ಯನವರು ಹಿಂದುಳಿದ ವರ್ಗ, ಹಿಂದುಳಿದ ಜನಾಂಗದ ಜನಜೀವನದ ಬಗ್ಗೆ ವಚನಗಳನ್ನು ಬರೆದು ಶೋಷಣೆಯನ್ನು ಖಂಡಿಸಿದವರು ಮತ್ತು ಶರಣ ಚಳುವಳಿಯಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಕಾಯಕ ದಾಸೋಹಗಳನ್ನು ತಪ್ಪದೇ ಪಾಲಿಸಿದಂತಹ ಶ್ರೇಷ್ಠ ಶರಣರು. ಅವರಿಗೆ ಮಾಡಿದ ಅವಮಾನ ಶರಣ ಕುಲಕ್ಕೆ ಮಾಡಿದ ಅವಮಾನವಾಗಿದೆ ಆದ್ದರಿಂದ ಕಿಡಿಗೇಡಿಗಳನ್ನು ಮತ್ತು ಇಂಥ ಕೃತ್ಯ ಎಸಗಲು ಪ್ರಚೋದಿಸಿದ ಶಕ್ತಿಗಳನ್ನು ಮಟ್ಟ ಹಾಕಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಶ್ರೀಮಂತ ಬಿರಾದಾರ್ ಶರಣರಲ್ಲಿ "ಇವನಾರವ ಯುನಾರವ ಎನ್ನದೆ ಇವ ನಮ್ಮವ ಇವ ನಮ್ಮವ"ಎನ್ನುವ ಭಾವನೆ ಇತ್ತು. ಅದರ ಜೊತೆಯಲ್ಲಿಯೇ ಕೆಟ್ಟದ್ದನ್ನು ತೀವ್ರವಾಗಿ ಖಂಡಿಸುವ ಗಣಾಚಾರಿ ಶರಣರು ಕೆಟ್ಟ ಕೃತ್ಯಗಳನ್ನು ಮಟ್ಟ ಹಾಕಲು ಸಿಡಿದೆ ಳಬೇಕೆಂದು ಕರೆ ನೀಡಿದರು. ಅಂಥ ಗಣಾಚಾರಿ ಶರಣರಲ್ಲಿ ಅಂಬಿಗರ ಚೌಡಯ್ಯನವರು ಅತ್ಯಂತ ಶ್ರೇಷ್ಠರಾದವರು, ಅವರಿಗೆ ಮಾಡಿದ ಅವಮಾನ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿಯ ಕಲಬುರ್ಗಿ ಜಿಲ್ಲಾ ಮುಖಂಡರಾದ ಭೀಮಶಾ ಖನ್ನಾ ಅವರು ಮಾತನಾಡಿ, ಸಮ ಸಮಾಜದ ನಿರ್ಮಾಣಕ್ಕಾಗಿ ನಿಂತ ಅಂಬಿಗರ ಚೌಡಯ್ಯನವರು ವೀರ ಗಣಾಚಾರಿಯಾಗಿದ್ದಾರೆ, ಅವರಿಗೆ ಮಾಡಿದ ಅವಮಾನವನ್ನು ಖಂಡಿಸುತ್ತಾ ಕಿಡಿಗೇಡಿಗಳನ್ನು ತಕ್ಷಣ ಶಿಕ್ಷೆಗೆ ಗುರುಪಡಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯ ಸಾನಿಧ್ಯ ವಹಿಸಿದ್ದ ಹಿರೇಮಠದ ಪೀಠಾಧಿಪತಿಗಳಾದ ವಿಶ್ವರಾಧ್ಯ ಮಳೆoದ್ರ ಶಿವಾಚಾರ್ಯರು, ಅಫಜಲಪುರ ತಾಲೂಕು ಕೋಲಿ ಸಮಾಜದ ಮಾಜಿ ಅಧ್ಯಕ್ಷರಾದ ಶಂಕರ ಮ್ಯಾಕೇರಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಾಂತೇಶ್ ಬಳುಂಡಗಿ, ಸಿದ್ದಪ್ಪ ಸಿನ್ನೂರ್, ಬೀರಣ್ಣ ಕನಕ ಟೈಲರ್, ವಕೀಲ ಗುರುದೇವ್ ಪೂಜಾರಿ, ದುಂಡು ಜಮಾದಾರ್, ರಾಮಲಿಂಗ ನಾಟಿಕಾರ್, ಮುಖಂಡರಾದ ಹಾಜಿ ಕಾಸಿಂಸಾಬ್ ಮುಜಾವರ್, ಸೈಫನ್ ಚಿಕ್ಕಳಗಿ, ಗೌಸ್ ಗಾಲಿಬಸಾಬ ಮುಜಾವರ್ ಮತ್ತು ಕೋಲಿ ಸಮಾಜದ ಯುವ ಗೆಳೆಯರ ಬಳಗದ ಕಾರ್ಯಕರ್ತರಾದ ಸಿದ್ದು ಮ್ಯಾಕೆರಿ, ದುಂಡು ಜಮಾದಾರ್, ರಜನಿಕಾಂತ್, ಸತೀಶ್ ಬೊಮ್ಮನಹಳ್ಳಿ, ಸಮರ್ಥ್ಯ ಮ್ಯಾಕೇರಿ, ಅಭಿ ತಳವಾರ, ಸಚಿನ್ ಮ್ಯಾಕೇರಿ, ರಾಜಣ್ಣ ಜಮಾದಾರ್, ರಾಜಕುಮಾರ್ ಜಮಾದಾರ್, ಎಲ್ಲಪ್ಪ ತಳವಾರ್ ಮತ್ತು ಬೇರೆ ಬೇರೆ ಬೇರೆ ಸಮುದಾಯದ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.