×
Ad

ಕ್ರೀಡೆಯು ಶಿಸ್ತು, ಸಮಯ ಪ್ರಜ್ಞೆ ಕಲಿಸುತ್ತದೆ : ಸಚಿವ ಪ್ರಿಯಾಂಕ್ ಖರ್ಗೆ

Update: 2025-01-25 21:23 IST

ಕಲಬುರಗಿ : ಕ್ರೀಡೆ ಕೇವಲ ಮನೋರಂಜನೆಯಲ್ಲ. ಅದು ಶಿಸ್ತು ಮತ್ತು ಸಮಯ ಪ್ರಜ್ಞೆ ಪಾಠ ಬೋಧಿಸುತ್ತದೆ. ನಾಯಕತ್ವದ ಗುಣಲಕ್ಷಣ ಕಲಿಸುತ್ತದೆ. ಆರ್.ಡಿ.ಪಿ.ಆರ್ ಇಲಾಖೆಯ ಎಲ್ಲ ಅಧಿಕಾರಿ-ನೌಕರರು ಒಂದು ಕುಟುಂಬದ ರೀತಿಯಲ್ಲಿ ಸ್ಪಂದನೆ, ಸಮನ್ವಯತೆ, ಸಮಯಪ್ರಜ್ಞೆ, ಪರಿಣಾಮಕಾರಿ ಅನುಷ್ಟಾನ ಹಾಗೂ ಹೊಣೆಗಾರಿಕೆ ಎಂಬ ಪಂಚ ಸೂತ್ರಗಳನ್ನು ಅಳವಡಿಸಿಕೊಂಡು ಗ್ರಾಮಾಭಿವೃದ್ಧಿಗೆ ಮುನ್ನುಡಿ ಬರೆಯಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಗುರುವಾರ ಕಲಬುರಗಿ ಇಲ್ಲಿನ ಗುಲ್ಬರ್ಗಾ ವಿ.ವಿ.ಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಮತ್ತು ಆರ್.ಡಿ.ಪಿ.ಆರ್. ಅಧಿಕಾರಿ ಮತ್ತು ನೌಕರರ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಕೂಸಿನ ಮನೆ, ಸಮುದಾಯ ಶೌಚಾಲಯ, ಅರಿವು ಕೇಂದ್ರಗಳಂತಹ ನೂತನ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನಮ್ಮ ಸರಕಾರದ ಯಾವುದೇ ಯೋಜನೆಗಳು ಜನರಿಗೆ ತಲುಪಬೇಕೆಂದರೆ ಕ್ರೀಡೆಯಲ್ಲಿ ನೀವು ಒಗ್ಗಟ್ಟಾಗಿ ಭಾಗವಹಿಸಿದಂತೆ ಅದೇ ತೆರವಾಗಿ ನಿಮ್ಮ ಕೆಲಸ ಮಾಡಿದರೆ ಗ್ರಾಮದಲ್ಲಿ ಬದಲಾವಣೆ ಹಾಗೂ ಅಭಿವೃದ್ದಿ ಕಾಣಲು ಸಾಧ್ಯ. ನೀವು ಜನರಿಗೆ ಸರಿಯಾಗಿ ಸ್ಪಂದಿಸಿ ಅವರಿಗೆ ಕಾಲಮಿತಿಯಲ್ಲಿ ಕೆಲಸ ಮಾಡಿದಲ್ಲಿ ನಿಮ್ಮ ನಾಯಕ ಸಿ.ಇ.ಓ ಭಂವರ್ ಸಿಂಗ್ ಮೀನಾ, ಸಿ.ಇ.ಓ. ಗಳ ನಾಯಕನಾಗಿರುವ ನಾನು ಮತ್ತು ನಮ್ಮೆಲ್ಲರ ಕ್ಯಾಪ್ಟನ್ ಮುಖ್ಯಮಂತ್ರಿ ಅವರು ಖುಷಿಯಾಗಿರುತ್ತೇವೆ ಎಂದರು.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪಂಚಾಯತ್ ಗಳಿಂದ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ನಿಮ್ಮೆಲ್ಲರ ಪರಿಶ್ರಮದಿಂದಾಗಿ ಇದೂವರೆಗೆ 1,000 ಕೋಟಿ ರೂ. ತೆರಿಗೆ ಸಂಗ್ರಹವಾಗಿದಕ್ಕೆ ಸಿ.ಎಂ. ಸಂತಸ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷಗಳು ಸರಕಾರದ ಬಳಿ ಹಣ ಇಲ್ಲ ಎಂದು ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಇತ್ತೀಚೆಗೆ 190 ವಿಧಾನಸಭಾ ಕ್ಷೇತ್ರಕ್ಕೆ ಹಳ್ಳಿಗಳ ರಸ್ತೆ, ಸಿ.ಸಿ.ಡ್ರೇನ್ ಕಾಮಗಾರಿಗೆಂದು ಪ್ರತಿ ಕ್ಷೇತ್ರಕ್ಕೆ 10 ಕೋಟಿ ರೂ. ಗಳಂತೆ 1,900 ಕೋಟಿ ರೂ. ಅನುದಾನ ನೀಡಿದ್ದು, 15 ದಿನದಲ್ಲಿ ಕ್ರಿಯಾ ಯೋಜನೆ ಸಿದ್ಧಗೊಳ್ಳಲಿದೆ ಎಂದರು.

ಡ್ರಾಪ್ ಔಟ್ ಮಕ್ಕಳನ್ನು ಶಾಲೆಗೆ ತಂದ ಕೀರ್ತಿ ಪ್ರಿಯಾಂಕ್ ಖರ್ಗೆಗೆ ಸಲ್ಲುತ್ತದೆ :

ವಿಧಾನ ಪರಿಷತ್ ಶಾಸಕ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಬಡವರು, ದಲಿತರ, ಶೋಷಿತರ ಧ್ವನಿಯಾಗಿ ಪ್ರಿಯಾಂಕ್ ಖರ್ಗೆ ಕಾರ್ಯನಿರ್ವಹಿಸುತ್ತಿದ್ದು, ಚಿತ್ತಾಪುರ ತಾಲೂಕಿನಲ್ಲಿ ಶಾಲೆಯಿಂದ ಡ್ರಾಪ್ ಔಟ್ ಆದ 10 ಸಾವಿರ ಮಕ್ಕಳನ್ನು ಮತ್ತೆ ಶಾಲೆಗೆ ಮರಳಿ ಕರೆತಂದು ಶಿಕ್ಷಣ ನೀಡುವ ಮೂಲಕ ಅವರು ಜೀವನಕ್ಕೆ ಹೊಸ ಭಾಷೆ ಬರೆದಿದ್ದಾರೆ. ಹಿಂದೆ ರಾಮಕೃಷ್ಣ ಹೆಗ್ಡೆ ಅವರ ಕಾಲದಲ್ಲಿ ಅಭಿವೃದ್ದಿ ಕೆಲಸ ನೋಡಬೇಕಾದರೆ ಮಲ್ಲಿಕಾರ್ಜುನ ಖರ್ಗೆ ಅವರ ಗುರುಮಠಕಲ್ ಕ್ಷೇತ್ರಕ್ಕೆ ನೋಡಿ ಎನ್ನುತ್ತಿದ್ದರು. ಈಗ ಚಿತ್ತಾಪೂರ ಕ್ಷೇತ್ರ ನೋಡುವ ಪರಿಸ್ಥಿತಿ ಇದೆ ಎಂದರು.

ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಐ.ಟಿ.-ಬಿ.ಟಿ ಸಚಿವರಾಗಿ ಪ್ರಿಯಾಂಕ್ ಖರ್ಗೆ ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ. ಆರ್.ಡಿ.ಪಿ.ಆರ್ ಇಲಾಖೆಯಿಂದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 80 ಕಿ.ಮೀ ಕಲ್ಯಾಣ ಪಥ ರಸ್ತೆ ನಿರ್ಮಿಸುತ್ತಿದ್ದಾರೆ. ರಾಜಕಾರಣಿಗೆ ಮುಂದಿನ ಚುನಾವಣೆ ಬದಲು ಮುಂದಿನ ಪೀಳಿಗೆಯ ಬಗ್ಗೆ ಚಿಂತನೆ ಇರಬೇಕೆಂಬ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಾತನ್ನು ಕಾರ್ಯ ರೂಪದಲ್ಲಿ ತರುತ್ತಿರುವ ಪ್ರಿಯಾಂಕ್ ಖರ್ಗೆ ಅವರು ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಕಿ ಚಂಪಾ ಕ್ರೀಡಾಂಗಣ ಸಮಗ್ರ ಅಭಿವೃದ್ಧಿಗೆ 30 ಕೋಟಿ ರೂ. ಅನುದಾನ ನೀಡಿದ್ದಾರೆ. ಅಲ್ಲದೆ ಮಹಿಳೆಯರಿಗೆ ಪ್ರತ್ಯೇಕ ಕ್ರೀಡಾ ಸಂಕೀರ್ಣ ಸಹ ನಿರ್ಮಿಸಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮಾತನಾಡಿ, ಜಿಲ್ಲಾ ಪಂಚಾಯತ್ ಅಧೀನದಲ್ಲಿ ಬರುವ 29 ಇಲಾಖೆ ಮೂಲಕ ಸರಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುತ್ತಿದ್ದು, ಸುಮಾರು ಜಿಲ್ಲೆಯ 30 ಲಕ್ಷ ಜನರಿಗೆ ಸೇವೆ ನೀಡುತ್ತಿದ್ದೇವೆ. ಈ ಒತ್ತಡದ ಬದುಕು ನಿವಾರಿಸುವ ಉದ್ದೇಶದ ಜೊತೆಗೆ ತಂಡ ಕಟ್ಟುವ ಸಾಮರ್ಥ್ಯ, ಸಮನ್ವಯತೆ, ನಾಯಕತ್ವ ಬೆಳೆಸುವ ಉದ್ದೇಶದಿಂದ ಈ ಕ್ರೀಡಾಕೂಟ ಆಯೋಜಿಸಿದೆ ಎಂದರು.

ಇದೇ ಸಂದರ್ಭದಲ್ಲಿ ಆರ್.ಡಿ.ಪಿ.ಅರ್ ಪರಿವಾರದಿಂದ ಅರಿವು ಕೇಂದ್ರಕ್ಕೆ ಸ್ಪರ್ಧಾತ್ಮಕ ಪುಸ್ತಕಗಳನ್ನು ಕೊಡುಗೆಯಾಗಿ ವೇದಿಕೆಯಲ್ಲಿದ್ದ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಗಣ್ಯರಿಗೆ ನೌಕರರು ನೀಡಿದರು. ಕ್ರೀಡಾಕೂಟಕ್ಕೆ ಪ್ರಾಯೋಜಕತ್ವದ ಸಹಕಾರ ನೀಡಿದ ಕಲಬುರಗಿ ನಗರದ ಮಣ್ಣೂರ ಆಸ್ಪತ್ರೆಯ ಡಾ.ಫಾರೂಕ್ ಮಣ್ಣೂರ, ಶ್ರೀ ಸಿಮೆಂಟ್ ಕಂಪನಿಯ ಅಸಿಸ್ಟೆಂಟ್ ಮ್ಯಾನೇಜರ್ ನಾಗರಾಜ ಅವರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಮಹಾನಗರ ಪಾಲಿಕೆ ಮೇಯರ್ ಯಲ್ಲಪ್ಪ ನಾಯ್ಕೋಡಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಡಿ.ಸಿ.ಎಫ್. ಸುಮಿತ್ ಪಾಟೀಲ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯ ಇದ್ದರು. ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಗದೇವಪ್ಪ ಅವರು ಸ್ವಾಗತಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News