ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ: ಕಲಬುರಗಿ ಡಿಸಿ ಬಿ.ಫೌಝಿಯಾ ತರನ್ನುಮ್
ಕಲಬುರಗಿ: “ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತಲ್ಲ, ವಿಶೇಷ ವಿಕಲಚೇತನರಲ್ಲಿರುವ ಕೌಶಲ್ಯಗಳನ್ನು ಗುರುತಿಸಿ ಅವರಿಗೆ ಅವಕಾಶಗಳನ್ನು ಕಲ್ಪಿಸುವುದು ಸಮಾಜದ ಜವಾಬ್ದಾರಿ” ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರು ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಕಲಚೇತನರ ಸೇವಾ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಎಂ.ಆರ್.ಡಬ್ಲ್ಯೂ/ಯು.ಆರ್.ಡಬ್ಲ್ಯೂ/ವಿ.ಆರ್.ಡಬ್ಲ್ಯೂ ಸೇರಿದಂತೆ ಅನೇಕ ಸ್ವಯಂಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ “ಸಾಮಾಜಿಕ ಪ್ರಗತಿಯನ್ನು ಸಾಧಿಸಲು ವಿಕಲಚೇತನರ ಒಳಗೊಂಡ ಸಮಾಜಗಳನ್ನು ನಿರ್ಮಿಸೋಣ” ಎಂಬ 2025ರ ವಿಶ್ವ ಸಂಸ್ಥೆಯ ಫೋಷವಾಕ್ಯದೊಂದಿಗೆ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 5,300 ಕ್ಕಿಂತ ಹೆಚ್ಚು ವಿಕಲಚೇತನರು ಮಾಸಾಶನ ಪಡೆಯುತ್ತಿದ್ದಾರೆ, “ಅಧಿಕಾರಿಗಳು ಮನೆಮನೆಗೆ ತೆರಳಿ ಆಧಾರ್ ಕಾರ್ಡ್ ಸೌಲಭ್ಯ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಕೆಲವರು ಕೇಂದ್ರಗಳಿಗೆ ಭೇಟಿ ನೀಡಿ ಆಧಾರ್ ಕಾರ್ಡ್ ಮಾಡಿಸಿಕೊಳ್ಳುತ್ತಿದ್ದಾರೆ,” ಎಂದರು.
ಸರ್ಕಾರದ ವಿವಿಧ ಇಲಾಖೆಗಳ ಶಿಷ್ಯವೇತನ ಹಾಗೂ ಅನುದಾನಾತ್ಮಕ ಯೋಜನೆಗಳನ್ನು ವಿಕಲಚೇತನರಿಗೆ ಸಮರ್ಪಕವಾಗಿ ಬಳಸಲಾಗುತ್ತಿದೆ ಎಂದರು.
ಅದೇ ರೀತಿ, ಜಿಲ್ಲೆಯಲ್ಲಿನ ದೊಡ್ಡ ಅಂಧ ಮಕ್ಕಳ ಶಾಲೆಯ ಹೊಸ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಪೂರ್ಣಗೊಳ್ಳಲಿದೆ ಎಂದು ವಿವರಿಸಿದರು.
“ಕೃಷಿ, ತೋಟಗಾರಿಕೆ, ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಮಟ್ಟದ ವಿವಿಧ ಸರ್ಕಾರೀ ಇಲಾಖೆಗಳಲ್ಲೂ ವಿಕಲಚೇತನರಿಗೆ 5% ನೇಮಕಾತಿ ಮೀಸಲಾತಿ ನೀಡಲಾಗುತ್ತಿದೆ. ನರೇಗಾದಲ್ಲಿ ವಿಕಲಚೇತನರು ಅರ್ಧ ಕೆಲಸ ಮಾಡಿದರೂ ಅವರಿಗೆ ಪೂರ್ಣ ಸಂಬಳ ನೀಡಲಾಗುತ್ತಿದೆ,” ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇದೇ ಸಂದರ್ಭದಲ್ಲಿ, ಕಲಬುರಗಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸ್ವಯಂಸೇವಾ ಸಂಸ್ಥೆಗಳು, ಎಂ.ಆರ್.ಡಬ್ಲೂ/ಯು.ಆರ್.ಡಬ್ಲೂ/ವಿ.ಆರ್.ಡಬ್ಲೂ ಸಂಘಟನೆಗಳಿಗೆ ಅವರು ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಹಾಗೂ ವಿಕಲಚೇತನರು ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಸಾದಿಕ್ ಹುಸೇನ್ ಖಾನ್ ಮಾತನಾಡಿ, “ವಿಶ್ವ ವಿಕಲಚೇತನರ ದಿನವನ್ನು 1992ರಲ್ಲಿ ವಿಶ್ವಸಂಸ್ಥೆ ಸ್ಥಾಪಿಸಿದ್ದು, ಸಮಾಜದಲ್ಲಿ ಸಮಾನ ಹಕ್ಕುಗಳನ್ನು ವಿಕಲಚೇತನರಿಗೆ ಒದಗಿಸುವುದು ಇದರ ಮುಖ್ಯ ಉದ್ದೇಶ” ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ ಸ್ವಾಗತಿಸಿದರು.
ಮಹಾನಗರ ಪಾಲಿಕೆಯ ಮಹಾಪೌರ ರಾಜೀವ ಜಾನೆ ಮಾತನಾಡಿ, “ಅಂಧ ಶಾಲೆಯ ವಿದ್ಯಾರ್ಥಿಗಳ ಕಲೆ-ಪ್ರತಿಭೆ ಶ್ಲಾಘನೀಯ. ಮುಂದೆಯೂ ಸರ್ಕಾರದ ಸೌಲಭ್ಯಗಳನ್ನು ಅವರನ್ನು ತಲುಪಿಸಲಾಗುತ್ತದೆ,” ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಿ. ಫಝಿಯಾ ತರನ್ನುಮ್ ಅವರು ಪ್ರಧಾನಮಂತ್ರಿ ದಿವ್ಯಶಾ ಕೇಂದ್ರ (ಪಿ.ಎಂ.ಡಿ.ಸಿ.) ಯೋಜನೆಯಡಿ ವಿಕಲಚೇತನರಿಗೆ ಬ್ಯಾಟರಿ ಚಾಲಿತ ಸೈಕಲ್‍ಗಳನ್ನು ವಿತರಿಸಿದರು.
ವಿಶೇಷ ವಿಕಲಚೇತನರಿಂದ ನೃತ್ಯ-ಗಾಯನ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ವಿಶೇಷ ಶಾಲೆಗಳ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯೂ ಜರುಗಿತು.
ಇದಕ್ಕೂ ಮೊದಲು ಜಗತ್ ವೃತ್ತದಲ್ಲಿ ವಿಕಲಚೇತನರ ದಿನಾಚರಣೆಯ ಅರಿವು ಮೂಡಿಸುವ ಜಾಥಾಕ್ಕೆ ವಿವಿಧ ಸಂಸ್ಥೆಗಳ ವತಿಯಿಂದ ಚಾಲನೆ ನೀಡಲಾಯಿತು.
ಕಲಬುರಗಿ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಶಿವರಾಜ ಶಾಸ್ತ್ರಿಯವರು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಂಗಮೇಶ್ವರ, ಕಿವುಡ ಮತ್ತು ಮೂಕ ಮಕ್ಕಳ ಸಂಘದ ಅಧ್ಯಕ್ಷ ಧನಂಜಯ, ಹೈದ್ರಾಬಾದ್ ಕರ್ನಾಟಕ ಅಂಗವಿಕಲರ ಕ್ಷೇಮಾಭಿವೃದ್ಧಿ ಸಮಿತಿಯ ದತ್ತು ಅಗರವಾಲ್, ಲಕ್ಷ್ಮೀಕಾಂತ ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪ್ರಾಂಶುಪಾಲರು, ಸ್ವಯಂ ಸೇವಾ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಭಾಗವಹಿಸಿದ್ದರು.